ಮ್ಯಾರಥಾನ್ ಓಡಿದ ಕ್ಯಾನ್ಸರ್ ಪೀಡಿತೆ 92 ವರ್ಷದ ಅಜ್ಜಿ!

ಅಮೆರಿಕದ ಹ್ಯಾರಿಯೆಟ್ ಥಾಮ್ಸನ್ (92) ಅವರು ಮ್ಯಾರಥಾನ್ ಓಟವನ್ನು ಯಶಸ್ವಿಯಾಗಿ ಮುಗಿಸಿ ಎಲ್ಲರ ಹುಬ್ಬೇರಿಸಿದ್ದಾರೆ...
ಮ್ಯಾರಥಾನ್
ಮ್ಯಾರಥಾನ್

ಸ್ಯಾನ್ ಡಿಯಾಗೊ: ಅಮೆರಿಕದ ಹ್ಯಾರಿಯೆಟ್ ಥಾಮ್ಸನ್ (92) ಅವರು ಮ್ಯಾರಥಾನ್ ಓಟವನ್ನು ಯಶಸ್ವಿಯಾಗಿ ಮುಗಿಸಿ ಎಲ್ಲರ ಹುಬ್ಬೇರಿಸಿದ್ದಾರೆ.

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸುಮಾರು 42 ಕಿ.ಮೀ. ದೂರದ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಅರ್ಧ ಓಡಿ ಹಿಂದೆ ಸರಿಯದೇ ಮ್ಯಾರಥಾನ್ ನ ಫಿನಿಶಿಂಗ್ ಲೈನ್ ದಾಟುವ ಮೂಲಕ ಮ್ಯಾರಥಾನ್ ಅನ್ನು ಸಂಪೂರ್ಣವಾಗಿ ಓಡಿ ಮುಗಿಸಿದ ವಿಶ್ವದ ಅತಿ ಹಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಇಲ್ಲಿ ಅಚ್ಚರಿಯ ವಿಷಯವೆಂದರೆ, ಹ್ಯಾರಿಯೆಟ್ ಕ್ಯಾನ್ಸರ್ ಪೀಡಿತೆ. ಇದನ್ನು ಲೆಕ್ಕಿಸದೇ ನಿಗದಿತ ದೂರವನ್ನು ಸುಮಾರು ಏಳು ತಾಸು, 24 ನಿಮಿಷ, 36 ಸೆಕೆಂಡ್‍ಗಳಲ್ಲಿ ಕ್ರಮಿಸಿದ ಹ್ಯಾರಿಯೆಟ್ ಅವರನ್ನು ಸುತ್ತಲಿದ್ದ ಜನರು ಕೇಕೆ ಹಾಕಿ ಅಪ್ಪಿಕೊಂಡು ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿದರು.

ಓಟದ ನಂತರ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಓಡುವಾಗ ಒಂದು ಹಂತದಲ್ಲಿ ನನಗೆ ದಣಿವಾಗಿದ್ದು ನಿಜ. ಮೊದಲ 23 ಕಿ.ಮೀ.ನ ದಾರಿ ಬೆಟ್ಟವನ್ನು ಹತ್ತಿ ಇಳಿಯುವುದಾಗಿತ್ತು. ಬೆಟ್ಟದ ದಾರಿಯಲ್ಲಿ ಓಡುವಾಗ ಕೊಂಚ ಕಷ್ಟವೆನಿಸಿತು. ಆದರೆ, ಇಳಿಯುವಾಗ ಕಷ್ಟವೆನಿಸಲಿಲ್ಲ' ಎಂದರಲ್ಲದೆ, 'ಈ ಮ್ಯಾರಥಾನ್ ಓಡಲು ಸಾಧ್ಯವಾಗಿದ್ದು ನಾನು ನನ್ನ ವಯಸ್ಸಿನ ಮೇಲೆ ಹೆಚ್ಚು ನಿಗಾ ಇಡದೇ ನನ್ನ ಮನಶಕ್ತಿಯ ಮೇಲೆ ಹೆಚ್ಚು ಗಮನ ನೀಡಿದ್ದೇ ಕಾರಣ' ಎಂಬ ಸ್ಫೂರ್ತಿಯ ನುಡಿಗಳನ್ನು ಹೇಳಿದರು.

ಈವರೆಗೆ ಮ್ಯಾರಥಾನ್ ಅನ್ನು ಸಂಪೂರ್ಣವಾಗಿ ಮುಗಿಸಿದ ಖ್ಯಾತಿ ಅಮೆರಿಕದವರೇ ಆದ ಗ್ಲಾಡಿಸ್ ಬರಿಲ್ ಎಂಬುವರ ಹೆಸರಲ್ಲಿತ್ತು. 2010ರಲ್ಲಿ ನಡೆದಿದ್ದ ಹೊನೊಲುಲು ಮ್ಯಾರಥಾನ್ ನಲ್ಲಿ ಅವರು ಈ ಸಾಧನೆ ಮಾಡಿದ್ದರು. ಆಗ, ಅವರ ವಯಸ್ಸು 92 ವರ್ಷ, 19 ದಿವಸ. ಇದೀಗ, ದಕ್ಷಿಣ ಕ್ಯಾಲಿಫೋರ್ನಿಯಾ ಮ್ಯಾರಥಾನ್ ನಲ್ಲಿ ಓಡಿರುವ ಹ್ಯಾರಿಯೆಟ್ ಅವರ ವಯಸ್ಸು 92 ವರ್ಷ, 65 ದಿನ. ಹಾಗಾಗಿ, ಮ್ಯಾರಥಾನ್ ಓಡಿ ಮುಗಿಸಿದ ಅತಿ ಹಿರಿಯ ವ್ಯಕ್ತಿ ಎಂಬ ಪಟ್ಟ ಹ್ಯಾರಿಯೆಟ್ ಅವರಿಗೆ ಲಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com