12 ಸೆಕೆಂಡ್ ತಡ ಪ್ರಸಾರ: ಬೆಟ್ಟಿಂಗ್‍ಗೆ ರಹದಾರಿ

ಕಳೆದ ತಿಂಗಳಷ್ಟೇ ಮುಕ್ತಾಯಗೊಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿನ ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕಳೆದ ತಿಂಗಳಷ್ಟೇ ಮುಕ್ತಾಯಗೊಂಡ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿನ ಬೆಟ್ಟಿಂಗ್ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಬುಕ್ಕಿಗಳು ಸಾವಿರಾರು ಕೋಟಿ ಬೆಟ್ಟಿಂಗ್ ನಡೆಸುವ ಪ್ರಕ್ರಿಯೆಯನ್ನು ಪತ್ತೆ ಹಚ್ಚಿದ್ದಾರೆ.

ಈ ಬಾರಿಯ ಐಪಿಎಲ್‍ನಲ್ಲಿ ಬುಕ್ಕಿಗಳು ತಂತ್ರಜ್ಞಾನದ ದುರ್ಬಳಕೆಯ ಮೂಲಕ ತಮ್ಮ ಬೆಟ್ಟಿಂಗ್ ದಂದೆ ನಡೆಸಿರುವುದು ಬೆಳಕಿಗೆ ಬಂದಿದೆ. ಐಪಿಎಲ್‍ನ ಎಲ್ಲ ಪಂದ್ಯದಲ್ಲೂ ಪ್ರತಿ ಎಸೆತಕ್ಕೂ ಬೆಟ್ಟಿಂಗ್ ಕಟ್ಟಲಾಗಿದೆ. ಮೈದಾನದಲ್ಲಿ ಒಂದು ಎಸೆತವಾದ ನಂತರ ಅದು ಟಿವಿಯಲ್ಲಿ ಪ್ರಸಾರವಾಗಲು, 12 ಸೆಕೆಂಡ್‍ಗಳ ಅಂತರವಿತ್ತು. ಈ ಅಲ್ಪ ಸಮಯದಲ್ಲಿ ಬುಕ್ಕಿಗಳು ತಮ್ಮ ಕರಾಮತ್ತು ತೋರುತ್ತಿದ್ದರು.

ಮೈದಾನದ ಒಳಗಿನಿಂದ ಪ್ರತಿ ಎಸೆತದಲ್ಲಿ ಏನಾಗಿದೆ ಎಂಬುದನ್ನು ದೂರವಾಣಿ ಮೂಲಕ ಮಾಹಿತಿ ಪಡೆದು, ಟಿವಿಯಲ್ಲಿ ಪ್ರಸಾರವಾಗುವಷ್ಟರಲ್ಲಿ ತಮ್ಮ ಬೆಟ್ ಅನ್ನು ಹೂಡಿಕೆ ಮಾಡುತ್ತಿದ್ದರು ಎಂದು ಅಹ್ಮದಾಬಾದ್‍ನ ಜಾರಿ ನಿರ್ದೇಶನಾಲಯ ಅಧಿರಿಗಳು ತಿಳಿಸಿದ್ದಾರೆ. ಅಲ್ಲದೆ ಈ ರಿತು ಸರಣಿ ಬಂಧನಗಳು ನಡೆದಿವೆ ಎಂದು ಮೂಲಗಳು ತಿಳಿಸಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಇತ್ತೀಚೆಗೆ ಬಂಧಿಸಲಾಗಿದ್ದ ಕೆಲ ಬುಕ್ಕಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಈ ಮಾಹಿತಿ ಬೆಳಕಿಗೆ ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬುಕ್ಕಿಗಳು ತಮ್ಮ ಪ್ರತಿನಿಧಿಯನ್ನು ಕ್ರೀಡಾಂಗಣದೊಳಕ್ಕೆ ಕಳುಹಿಸುತ್ತಾರೆ. ನಂತರ ಆತನಿಂದ ಪ್ರತಿ ಎಸೆತದ ಕುರಿತ ಮಾಹಿತಿಯನ್ನು ದೂರವಾಣಿ ಮೂಲಕ ಪಡೆಯುತ್ತಾರೆ. ಜನರು ಬೆಟ್ಟಿಂಗ್ ನಡೆಸುವ ಮುನ್ನವೇ ಪಂದ್ಯದ ಮಾಹಿತಿಯನ್ನು ತಿಳಿದುಕೊಳ್ಳುವುದರಿಂದ ಬುಕ್ಕಿಗಳು, ಟಿವಿಯಲ್ಲಿ ಪ್ರಸಾರವಾಗಲು ಇರುವ ಅಲ್ಪ ಸಮಯದಲ್ಲೇ ತಮ್ಮ ಬೆಟ್ಟಿಂಗ್ ಕ್ರಮವನ್ನು ಬದಲಿಸುತ್ತಾರೆ ಎಂದು ಇಡಿ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಸಾರ ಕಳ್ಳತನ: ಬುಕ್ಕಿಗಳು ಕೇವಲ ತಮ್ಮ ವ್ಯಕ್ತಿ ದೂರವಾಣಿ ಮೂಲಕ ನೀಡುವ ಮಾಹಿತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ಮೈದಾನದ ಘಟನೆಗಳು ಟಿವಿಯಲ್ಲಿ ಪ್ರಸಾರವಾಗುವ ಮೊದಲೇ ಟಿವಿ ಸಿಗ್ನಲ್‍ಗಳನ್ನು ಕಳ್ಳತನ ಮಾಡಿ, ಸಹಜ ಪ್ರಸಾರಕ್ಕೂ ಮುನ್ನವೇ ಪಂದ್ಯವನ್ನು ವೀಕ್ಷಿಸಿರುತ್ತಾರೆ. ಇದು ಒಂದು ರೀತಿ ವಿದ್ಯುತ್ ಕಳ್ಳತನದಂತೆ ನಡೆಯುತ್ತದೆ. ಈ ಮೂಲಕ ಅತ್ಯುನ್ನತ ತಂತ್ರಜ್ಞಾನವನ್ನು ದುರುಪಯೋಗ ಪಡಿಸಿಕೊಂಡು ಬುಕ್ಕಿಗಳು ತಮ್ಮ ಜಾಲವನ್ನು ನಡೆಸುತ್ತಾರೆ ಎಂದು ತಿಳಿಸಲಾಗಿದೆ. ನಮ್ಮ ತನಿಖಾ ತಂಡ ಈ ಬುಕ್ಕಿಗಳು ಹೇಗೆ ಕಾನೂನು ಬಾಹೀರವಾಗಿ ಸಿಗ್ನಲ್‍ಗಳನ್ನು ಕದ್ದು, ಜನರಿಗೆ ತಲುಪುವ ಮುನ್ನವೇ ನೇರ ಪ್ರಸಾರ ಪಡೆಯುತ್ತಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾರಿ ನಿರ್ದೇಶನಾಲಯ ತಂಡವು ಹಣಕಾಸು ಮತ್ತು ವಿದೇಶಿ ವಿನಿಮಯ ಅವ್ಯವಹಾರದ ಜತೆಗೆ, ಟಿವಿಯಲ್ಲಿ ಪಂದ್ಯ ಪ್ರಸಾರಕ್ಕೂ ಮುನ್ನ ಸಿಗ್ನಲ್ ಪಡೆಯುವಂತಹ ಆಂಟೆನಾಗಳನ್ನು ಇವರಿಗೆ ಯಾರು ನೀಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದಿದ್ದಾರೆ. ಇಂಗ್ಲೆಂಡ್ ಮೂಲದ ಕೈವಾಡ? ಈವರೆಗೆ ಬಂಧಿತರಾಗಿರುವ ಬುಕ್ಕಿಗಳಿಗೂ ಮತ್ತು ಯುಕೆ ಮೂಲದ ಬೆಟ್ಟಿಂಗ್ ಜಾಲಕ್ಕೂ ಸಂಪರ್ಕ ವಿದೆಯೇ ಎಂಬುದರ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಬೆಟ್ಟಿಂಗ್‍ನಲ್ಲಿ ತೊಡಗಿರುವ ಹಣಕಾಸಿನ ವ್ಯವಹಾರದ ಕುರಿತು ಮಾಹಿತಿ ನೀಡುವಂತೆ ಬ್ರಿಟನ್ ಅಧಿಕಾರಿಗಳಿಗೆ ಇಡಿ ಪತ್ರಬರೆದಿರುವುದಾಗಿ ಮೂಲಗಳು ತಿಳಿಸಿವೆ.

ಹವಾಲ ಮೂಲಕ ಹಣಕಾಸು ವ್ಯವಹಾರದ ಶಂಕೆ:
ಇಡಿ ತಂಡ ಈವರೆಗೆ ನಡೆಸಿರುವ ತನಿಖೆ ಪ್ರಕಾರ ಬೆಟ್ಟಿಂಗ್ ಜಾಲದ ಹಣಕಾಸು ಪ್ರಕ್ರಿಯೆ ಹವಾಲ ಮೂಲಕ ಹರಿದಾಡುತ್ತಿದೆ. ಕಳೆದ ಎರಡು ತಿಂಗಳಲ್ಲಿನ ವಿಚಾರಣೆಯಲ್ಲಿ ಇಡಿ ತಂಡ ರು.2000 ಕೋಟಿ ಬೆಟ್ಟಿಂಗ್ ನಡೆದಿರುವುದಾಗಿ ತಿಳಿಸಿದೆ. ಈವರೆಗೆ ಬಂಧಿಸಲಾಗಿರುವ ಬುಕ್ಕಿಗಳನ್ನು ಹಣಕಾಸು ಮತ್ತು ವಿದೇಶಿ ವಿನಿಮಯ ಅವ್ಯವಹಾರ ಕಾಯ್ದೆ ಅಡಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com