ಬರ್ಮಿಂಗ್ ಹ್ಯಾಮ್: ಇಂಗ್ಲೆಂಡ್ ತಂಡ ತನ್ನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಭಾರಿ ಅಂತರದ ಗೆಲವು ದಾಖಲಿಸಿದ ಸಾಧನೆ ಮಾಡಿದೆ. ಈ ಐತಿಹಾಸಿಕ ಸಾಧನೆಯಲ್ಲಿ ಶತಕವೀರರಾದ ಜೋಸ್ ಬಟ್ಲರ್ ಮತ್ತು ಜೋ ರೂಟ್ ಅವರ ಪಾತ್ರ ಮಹತ್ವದ್ದಾಗಿದೆ. ಹಾಗೆಯೇ ಏಳನೇ ವಿಕೆಟ್ ಪಾಲುದಾರಿಕೆ ಆಟದಲ್ಲಿ ಬಟ್ಲರ್ ಮತ್ತು ಆದಿಲ್ ರಶೀದ್ ಅವರಿಂದ ಹೊರಹೊಮ್ಮಿದ ವಿಶ್ವದಾಖಲೆ ಸಾಧನೆ ಕೂಡ ಇಂಗ್ಲೆಂಡ್ ಇತಿಹಾಸ ಬರೆಯಲು ಕಾರಣವಾಗಿದೆ.
ಎಜ್ ಬಾಸ್ಟನ್ ನಲ್ಲಿ ಮಂಗಳವಾರ ತಡರಾತ್ರಿ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು 210 ರನ್‍ಗಳ ಭಾರಿ ಅಂತರದಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಭೇರಿ ಬಾರಿಸಿದರು. ಇದರೊಂದಿಗೆ ಇಂಗ್ಲೆಂಡ್ ಏಕದಿನ ಕ್ರಿಕೆಟ್ ನಲ್ಲಿ ಇಷ್ಟು ಅಂತರದ ಜಯ ಸಂಪಾದಿಸಿದ್ದು ಇದೇ ಮೊದಲು. ಈ ಮುನ್ನ 1975ರ ಲಾಡ್ರ್ಸ್ ಪಂದ್ಯದಲ್ಲಿ ಭಾರತದ ವಿರುದ್ಧ 202 ರನ್‍ಗಳ ಅಂತರದಲ್ಲಿ ಜಯ ಗಳಿಸಿದ್ದು, ಇಂಗ್ಲೆಂಡ್‍ನ ದೊಡ್ಡ ಗೆಲುವಾಗಿತ್ತು.
ಈವಿಜಯೋತ್ಸವದ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯೊಂದಿಗೆ ಆತಿಥೇಯರು ಶುಭಾರಂಭ ಮಾಡಿದರು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಇಂಗ್ಲೆಂಡ್ ಬ್ಯಾಟ್ಸ್ ಮನ್ ಗಳು, ಸಂಪೂರ್ಣವಾಗಿ ಇದನ್ನು ಬಳಸಿಕೊಂಡರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಜೋ ರೂಟ್ (104ರನ್, 78 ಎಸೆತ, 13 ಬೌಂಡರಿ, 2 ಸಿಕ್ಸರ್) ಮತ್ತು ಆರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಜೋಸ್ ಬಟ್ಲರ್ (129ರನ್, 77 ಎಸೆತ, 13 ಬೌಂಡರಿ, 5 ಸಿಕ್ಸರ್) ಅವರ ಆಕರ್ಷಕ ಶತಕಗಳ ನೆರವಿನಿಂದ ಇಂಗ್ಲೆಂಡ್ 50 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 408 ರನ್‍ಗಳ ಬೃಹತ್ ಮೊತ್ತ ಸಂಪಾದಿಸಿತು.
ಇಂಗ್ಲೆಂಡ್ ಪಾಲಿಗೆ ಇದು ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಬೃಹತ್ ಮೊತ್ತವಾಗಿದೆ. ಈ ಮುನ್ನ 2005ರಲ್ಲಿ ಬಾಂಗ್ಲಾದೇಶ ವಿರುದ್ಧ 391 ರನ್‍ಗಳಿಸಿದ್ದು, ಶ್ರೇಷ್ಠ ಮೊತ್ತದ ಸಾಧನೆ ಎನಿಸಿತ್ತು. ಈ ನಡುವೆ ಬಟ್ಲರ್ ಮತ್ತು ರಶೀದ್ 7ನೇ ವಿಕೆಟ್ ಜೊತೆಯಾಟದಲ್ಲಿ 17.3 ಓವರ್ ಗಳನ್ನು ಎದುರಿಸಿ 177 ರನ್ ಸೇರಿಸಿದ್ದು ವಿಶ್ವದಾಖಲೆ ಸಾಧನೆಯಾಯಿತು. ಈ ಹಿಂದೆ ಜಿಂಬಾಬ್ವೆಯ ಆಂಡಿ ಫ್ಲಾವರ್ ಮತ್ತು ಹೀತ್ ಸ್ಟ್ರೀಕ್ ಅವರು 2001ರಲ್ಲಿ ನಡೆದ ಇಂಗ್ಲೆಂಡ್ ಎದುರಿನ ಪಂದ್ಯದಲ್ಲಿ 130 ರನ್ ಸೇರಿಸಿ ವಿಶ್ವದಾಖಲೆ ನಿರ್ಮಿಸಿದ್ದ ಸಾಧನೆಯನ್ನು ಬಟ್ಲರ್ ಮತ್ತು ರಶೀದ್ ಅಳಿಸಿ ಹಾಕಿದರು.
ಸಾಧಾರಣ ಮೊತ್ತಕ್ಕೆ ನ್ಯೂಜಿಲೆಂಡ್ ಪತನ: ಗೆಲ್ಲಲು 409 ರನ್‍ಗಳ ಅತ್ಯಂತ ಕಠಿಣ ಗುರಿ ಬೆಂಬತ್ತಿದ ನ್ಯೂಜಿಲೆಂಡ್ ತಂಡಕ್ಕೆ ಕೇವಲ 198 ರನ್‍ಗಳಿಸಲಷ್ಟೇ ಸಾಧ್ಯವಾಯಿತು. ಜೋಸ್ ಬಟ್ಲರ್ ಪಂದ್ಯಶ್ರೇಷ್ಠ ಗೌರವಕ್ಕೆ ಭಾಜನರಾದರು.
Advertisement