ಆನಂದ್ ಗೆ 2ನೇ ಡ್ರಾ

ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಮಂದಗತಿಯ ಆಟ ಮುಂದುವರಿಸಿದ್ದು
ವಿಶ್ವನಾಥನ್ ಆನಂದ್
ವಿಶ್ವನಾಥನ್ ಆನಂದ್

ಸ್ಟಾವೆಂಜರ್ (ನಾರ್ವೆ): ಐದು ಬಾರಿ ವಿಶ್ವ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಮಂದಗತಿಯ ಆಟ ಮುಂದುವರಿಸಿದ್ದು, ನಾರ್ವೆ ಚೆಸ್ ಟೂರ್ನಿಯಲ್ಲಿ ಮತ್ತೊಂದು ಡ್ರಾ ಫಲಿತಾಂಶ ಪಡೆದಿದ್ದಾರೆ. ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ವಿಶ್ವನಾಥನ್ ಆನಂದ್, ತಮ್ಮ ಎದುರಾಳಿ ಹಾಲೆಂಡ್‍ನ ಅನೀಶ್ ಗಿರಿ ವಿರುದ್ಧ ಡ್ರಾ ಸಾಧಿಸಲಷ್ಟೇ ಶಕ್ತರಾದರು. ಅನೀಶ್ ಅವರ ಪ್ರಬಲ ರಕ್ಷಣಾತ್ಮಕ ಆಟವನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆನಂದ್ ಡ್ರಾಗೆ ತೃಪ್ತಿಪಟ್ಟಿದ್ದಾರೆ. ಮೊದಲ ಪಂದ್ಯದಲ್ಲಿ ಇಟಲಿಯ ಫ್ಯಾಭಿಯಾನೋ ಕರೌನಾ ವಿರುದ್ಧ ಬಿಳಿ ಕಾಯಿ ನಡೆಸಿ ಡ್ರಾ ಸಾಧಿಸಿದ್ದ ಆನಂದ್, ಈ ಪಂದ್ಯದಲ್ಲಿ ಕಪ್ಪುಕಾಯಿಯನ್ನು ನಡೆಸಿದ್ದರು. ಅನೀಶ್ ಗಿರಿ ಕೆಲ ತಪ್ಪನ್ನು ಎಸಗಿದಾಗ ಆಕ್ರಮಣಕ್ಕೆ ಆನಂದ್ ಮುಂದಾದರು, ಗಿರಿ ತಕ್ಷಣವೇ ಎಚ್ಚೆತ್ತು ಮತ್ತೆ ರಕ್ಷಣಾತ್ಮಕ ಆಟಕ್ಕೆ  ಮುಂದಾಗುತ್ತಿದ್ದರು. ಆರಂಭದಲ್ಲಿ ದುಬಾರಿ ನಡೆಗೆ ಮುಂದಾಗಿದ್ದ ಅನೀಶ್, ತಮ್ಮ ರಾಣಿಗೆ ಸಂಚಕಾರ ತಂದುಕೊಂಡಿದ್ದರು. ನಂತರ 44ನೇ ನಡೆಯಲ್ಲಿ ಆನಂದ್ ಮತ್ತೆ ಅನೀಶ್ ಅವರ ಕೋಟೆ ಪ್ರವೇಶಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಒಂದು ಹಂತದಲ್ಲಿ ಪಂದ್ಯವನ್ನು ಗೆದ್ದುಕೊಳ್ಳುವ ಅವಕಾಶವಿದ್ದರೂ ಅದನ್ನು ಬಳಸಿಕೊಳ್ಳುವಲ್ಲಿ ಆನಂದ್ ವಿಫಲವಾಗಿದ್ದು, ಅಚ್ಚರಿ ಮೂಡಿಸಿತು.
ವಿಶ್ವ ಚಾಂಪಿಯನ್‍ಗೆ ಮತ್ತೆ ಆಘಾತ: ವಿಶ್ವ ಚಾಂಪಿಯನ್ ನಾರ್ವೆಯ ಮ್ಯಾಗ್ನಸ್ ಕಾರ್ಲ್‍ಸನ್ ದ್ವಿತೀಯ ಸುತ್ತಿನ ಪಂದ್ಯದಲ್ಲೂ ಸೋಲನುಭವಿಸುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ. ಮೊದಲ ಪಂದ್ಯದಲ್ಲಿ ಬಲ್ಗೇರಿಯಾದ ವೆಸೆಲಿನ್ ಟೊಪಲೋವ್
ವಿರುದ್ದ ಸೋತಿದ್ದ ಕಾರ್ಲ್‍ಸನ್, ಎರಡನೇ ಸುತ್ತಿನ ಪಂದ್ಯದಲ್ಲಿ ಇಟಲಿಯ ಕರೌನಾ ವಿರುದ್ಧ ಸೋಲನುಭವಿಸಿದರು. ಈ ಮೂಲಕ ಸತತ ಎರಡು ಪಂದ್ಯದಲ್ಲಿ ಸೋಲನುಭವಿಸಿದಂತಾಗಿದೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com