ಇಂಗ್ಲೆಂಡ್ ಮಣಿಸಿದ ಬಾಂಗ್ಲಾದೇಶ; ಇಂಗ್ಲೆಂಡ್ ಕ್ವಾರ್ಟರ್ ಫೈನಲ್ಸ್ ನಿಂದ ಹೊರಕ್ಕೆ

ಕ್ರಿಕೆಟ್ ವಿಶ್ವಕಪ್ ನ ಕುತೂಹಲಕಾರಿ ಘಟ್ಟದಲ್ಲಿ ಬಾಂಗ್ಲಾ ದೇಶ, ಇಂಗ್ಲೆಂಡ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅಡಿಲೇಡ್: ಕ್ರಿಕೆಟ್ ವಿಶ್ವಕಪ್ ನ ಕುತೂಹಲಕಾರಿ ಘಟ್ಟದಲ್ಲಿ ಬಾಂಗ್ಲಾ ದೇಶ, ಇಂಗ್ಲೆಂಡ್ ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ. ಈ ಸೋಲಿನಿಂದ ಎಂಟರ ಘಟ್ಟವನ್ನು ತಲುಪಲು ವಿಫಲರಾಗಿರುವ ಇಂಗ್ಲೆಂಡ್ ತಂಡಕ್ಕೆ ಆಘಾತವಾಗಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆರಿಕೊಂಡ ಇಂಗ್ಲೆಂಡ್ ಮೊದಲಿಗೆ ಉತ್ತಮ ಬೌಲಿಂಗ್ ದಾಳಿ ತೋರಿದರೂ ಬಾಂಗ್ಲಾ ದೇಶ ೫೦ ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ ೨೭೫ ರನ್ನುಗಳನ್ನು ದಾಖಲಿಸುವುದರಲ್ಲಿ ಸಫಲವಾಯಿತು. ಮೋಹಮುದ್ದಲ್ಲಾ ಶತಕ ಗಳಿಸಿ ಬಾಂಗ್ಲಾ ದೇಶಕ್ಕೆ ಆಸರೆಯಾದರು. ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಈ ಮೊತ್ತವನ್ನು ಸುಲಭವಾಗಿ ಚೇಸ್ ಮಾಡುತ್ತದೆಂದು ನಿರೀಕ್ಷಿಸಲಾಗಿತ್ತು. ಆದರೆ ಬಾಂಗ್ಲಾದ ಬೌಲರ್ಗಳು ನಿಯಮಿತವಾಗಿ ಇಂಗ್ಲೆಂಡ್ ನ ವಿಕೆಟ್ ಗಳನ್ನು ಕಬಳಿಸುತ್ತಾ ಹೋದರು. ಕೊನೆಗೆ ಇಂಗ್ಲೆಂಡ್ ೪೮.೩ ಓವರ್ ಗಳಲ್ಲಿ ೨೬೦ ರನ್ ಗಳಿಸುವಲ್ಲಿ ಆಲೌಟ್ ಆಯಿತು. ಬಾಂಗ್ಲಾ ದೇಶ ೧೫ ರನ್ ಗಳ ಐತಿಹಾಸಿಕ ವಿಜಯ ದಾಖಲಿಸಿತು.

೭ ಅಂಕಗಳನ್ನು ಶೇಖರಿಸಿರುವ ಬಾಂಗ್ಲಾ ತಂಡ ಮುಂದಿನ ಪಂದ್ಯವನ್ನು ನ್ಯೂಝೀಲ್ಯಾಂಡ್ ಜೊತೆ ಸೆಣಸಲಿದೆ. ಈ ಪಂದ್ಯ ಸೋತರೂ ಕೂಡ ಬಾಂಗ್ಲಾ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸುವುದು ಖಚಿತವಾಗಿದೆ. ಈ ಸೋಲಿನಿಂದ ಕ್ವಾರ್ಟರ್ ಫೈನಲ್ಸ್ ನಿಂದ ಹೊರಬಿದ್ದಿರುವ ಇಂಗ್ಲೆಂಡ್ ತಮ್ಮ ಅಭಿಮಾನಿಗಳಿಗೆ ನಿರಾಶೆ ಉಂಟು ಮಾಡಿದೆ.

ಬಾಂಗ್ಲಾ ದೇಶ ಇನ್ನುಳಿದ ಪಂದ್ಯವನ್ನು ಸೋತರೆ ಅವರ ಗುಂಪಿನಲ್ಲಿ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸುವ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯಲಿದೆ. ಮತ್ತೊಂದು ಗುಂಪಿನಲ್ಲಿ ಭಾರತ ಪಟ್ಟಿಯಲ್ಲಿ ಮೊದಲನೇ ಸ್ಥಾನ ಗಳಿಸುವುದು ಬಹುತೇಕ ಖಚಿತವಾಗಿದ್ದು, ಕ್ವಾರ್ಟರ್ ಫೈನಲ್ಸ್ ನಲ್ಲಿ ಭಾರತ ಬಾಂಗ್ಲಾ ದೇಶದ ಜೊತೆ ಆಡಲಿದೆ ಎಂಬುದು ಪಂಡಿತರ ಲೆಕ್ಕಾಚಾರ!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com