
ಮೆಲ್ಬೋರ್ನ್: ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) 30 ಯಾರ್ಡ್ ಸರ್ಕಲ್ ಹೊರಗೆ ನಾಲ್ಕೇ ಫೀಲ್ಡರ್‌ಗಳು ಇರಬೇಕು ಎಂಬ 2015ರ ವಿಶ್ವಕಪ್ ಕ್ರಿಕೆಟ್ ನಿಯಮವನ್ನು ಬದಲಾಯಸಬೇಕು ಎಂದು ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಶುಕ್ರವಾರ ಹೇಳಿದ್ದಾರೆ.
ಸರ್ಕಲ್ ಹೊರಗೆ 4 ಫೀಲ್ಡರ್‌ಗಳನ್ನು ಇರಿಸಬೇಕಾದ ಐಸಿಸಿ ನಿಯಮದಿಂದ ಕ್ರಿಕೆಟ್‌ಗೆ ಒಳಿತಾಗುವುದಕ್ಕಿಂತ ಹಾನಿಯೇ ಹೆಚ್ಚಾಗುತ್ತದೆ. ಈ ನಿಯಮದಿಂದ ಬ್ಯಾಟ್ಸಮನ್‌ಗಳು ಹೆಚ್ಚು ರನ್‌ಗಳನ್ನು ಹೊಡೆಯುತ್ತಾರೆ. ಬೌಲರ್‌ಗಳ ಶಕ್ತಿ, ಕೌಶಲವೆಲ್ಲವೂ ವ್ಯರ್ಥವಾಗುತ್ತದೆ ಎಂದು ಧೋನಿ ಅಭಿಪ್ರಾಯ ಪಟ್ಟಿದ್ದಾರೆ.
ಈ ನಿಯಮದಿಂದಾಗಿ ಮೊದಲು ಬ್ಯಾಟ್ ಮಾಡುವ ತಂಡಕ್ಕೆ ಭಾರೀ ಮೊತ್ತ ಕಲೆಹಾಕುವುದು ಅವಕಾಶ ಸಿಗುತ್ತದೆ. ಆದರೆ ಪಿಚ್ ಸ್ವರೂಪ ಬದಲಾಗುತ್ತಲೇ ಎರಡನೇ ಬ್ಯಾಟಿಂಗ್ ನಡೆಸುವ ತಂಡಕ್ಕೆ ಕಷ್ಟಕರ ಸನ್ನಿವೇಶ ಎದುರಾಗುತ್ತದೆ.ಹೀಗಾಗಿ 30 ಯಾರ್ಡ್ ಸರ್ಕಲ್ ಹೊರಗೆ ನಾಲ್ಕೇ ಫೀಲ್ಡರ್‌ಗಳನ್ನು ಇರಿಸಬೇಕೆಂಬ ನಿಯಮವನ್ನು ಐಸಿಸಿ ಬದಲಾಯಿಸುವ ಅಗತ್ಯವಿದೆ ಎಂದು ಧೋನಿ ಹೇಳಿದ್ದಾರೆ.
ಈಗಿನ ಐಸಿಸಿ ನಿಯಮದಿಂದಾಗಿ 30 ಯಾರ್ಡ್ ಸರ್ಕಲ್ ಒಳಗೆ ಒಬ್ಬ ಹೆಚ್ಚುವರಿ ಫೀಲ್ಡ್‌ರ್ ಇರುವುದರಿಂದ ಡಾಟ್ ಬಾಲ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಇದು ಕೂಡ ನನ್ನ ಅಭಿಪ್ರಾಯದಲ್ಲಿ ಒಳ್ಳೆಯದಲ್ಲ. ಸಿಂಗಲ್ ರನ್ ಮೂಲಕ ಸ್ಕೋರ್ ಬೋರ್ಡ್ ಮುಂದಕ್ಕೆ ಹೋಗುತ್ತಲೇ ಇರುವಂತೆ ಮಾಡುವುದು ಕೂಡ ಒಂದು ಕೌಶಲವೇ ಆಗಿದೆ. ಆದರೆ ಅದಕ್ಕೀಗ ಅಡ್ಡಿಯಾಗಿದೆ ಎಂದು ಧೋನಿ ತಿಳಿಸಿದರು.
Advertisement