
ಮಾಯಡ್ರಿಡ್(ಸ್ಪೇನ್): ಭಾರತದ ಸಾನಿಯಾ ಮಿರ್ಜಾ ಮತ್ತು ಸ್ವಿಜರ್‍ಲೆಂಡ್‍ನ ಮಾರ್ಟಿನಾ ಹಿಂಗಿಸ್ ಅವರು ಮ್ಯಾಡ್ರಿಡ್ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಆದರೆ, ಇದೇ ಟೂರ್ನಿಯ ಪುರುಷರ ವಿಭಾಗದಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಮಹೇಶ್ ಭೂಪತಿ ಸೋಲಿನ ಕಹಿ ಅನುಭವಿಸಿದ್ದಾರೆ. ಅಗ್ರಶ್ರೇಯಾಂಕಿತ ಜೋಡಿಯಾಗಿರುವ
ಸಾನಿಯಾ ಮತ್ತು ಹಿಂಗಿಸ್, ಎರಡನೇ ಸುತ್ತಿನ ಪಂದ್ಯದಲ್ಲಿ ಸ್ಲೊವಾಕಿಯಾದ ಜನೆಟೆ ಹುಸರೊವಾ ಮತ್ತು ರೊಮೇನಿಯಾದ ರಾಲುಕಾ ಓಲಾರು ವಿರುದ್ಧ 6-2, 6-3 ನೇರ ಸೆಟ್‍ಗಳಿಂದ ಸುಲಭ ಜಯ ದಾಖಲಿಸಿದರು.
ಒಂದು ಗಂಟೆ ಆಟದಲ್ಲೇ ಎದುರಾಳಿ ಜೋಡಿಗೆ ಆಘಾತ ನೀಡುವಲ್ಲಿ ಯಶಸ್ವಿಯಾದ ಭಾರತ -ಸ್ವಿಸ್ ಜೋಡಿಯು ಪಂದ್ಯದುದ್ದಕ್ಕೂ ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿ ಗಮನ ಸೆಳೆಯಿತು. ಸಾನಿಯಾ ಮತ್ತು ಹಿಂಗಿಸ್, ಎಂಟರ ಘಟ್ಟದ ಪಂದ್ಯದಲ್ಲಿ ಏಳನೇ ಶ್ರೇಯಾಂಕಿತ ಜೋಡಿಯಾದ ಅಮೆರಿಕದ ಬೆಥಾನಿ ಮಾಟೆಕ್ ಸ್ಯಾಂಡ್ಸ್ ಮತ್ತು ಜೆಕ್ ಗಣರಾಜ್ಯದ ಲೂಸಿ ಸಫರೊವಾ ಅವರನ್ನು ಎದುರಿಸಲಿದ್ದಾರೆ.
ಭೂಪತಿ-ನಿಕ್‍ಗೆ ಸೋಲು
ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಮಹೇಶ್ ಭೂಪತಿ ಮತ್ತು ಆಸ್ಟ್ರಿಯಾದ ನಿಕ್ ಕಿರ್ಗಿಯೊಸ್ ಮೊದಲ ಸುತ್ತಿನ ಸಮರದಲ್ಲೇ ಆಘಾತ ಅನುಭವಿಸಿದರು. ದಕ್ಷಿಣ ಆಫ್ರಿಕಾದ
ಕೆವಿನ್ ಆ್ಯಂಡರ್ಸನ್ ಮತ್ತು ಫ್ರಾನ್ಸ್ ನ ಜೆರೆಮಿ ಚಾರ್ಡಿ ಅವರು 7-5, 6-3 ನೇರ ಸೆಟ್ ಗಳಿಂದ ಭೂಪತಿ-ನಿಕ್ ಅವರಿಗೆ ಸೋಲುಣಿಸಿ ಮುನ್ನಡೆಯಿತು.
ಸುಮಾರು ಒಂದೂವರೆ ಗಂಟೆ ಆಟದಲ್ಲಿ ಭೂಪತಿ ಮತ್ತು ನಿಕ್ ಮೊದಲ ಸೆಟ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಎದುರಾಳಿ ಆಟಗಾರರ ಮುಂದೆ ಕಠಿಣ ಸವಾಲು ನಿಲ್ಲಿಸಿದರು. ಆದರೆ, ಆ್ಯಂಡರ್ಸನ್ ಮತ್ತು ಜೆರೆಮಿ ಆತ್ಮವಿಶ್ವಾಸದಿಂದ ಹೋರಾಟ ನಡೆಸುವ ಮೂಲಕ ತಮಗೆ ಎದುರಾದ ಅಡೆ-ತಡೆಗಳನ್ನು ಮೆಟ್ಟಿನಿಲ್ಲಲು ಯಶಸ್ವಿಯಾದರು. ಎರಡನೇ ಸೆಟ್‍ನಲ್ಲಿ ಇದೇ ಸ್ಫೂರ್ತಿಯಲ್ಲಿ ಮುನ್ನುಗ್ಗುವ ಮೂಲಕ ಅಂತಿಮ ಗೆಲವು ತಮ್ಮದಾಗಿಸಿಕೊಂಡು ಎರಡನೇ ಸುತ್ತಿಗೆ ಹೆಜ್ಜೆ ಹಾಕಿದರು.
Advertisement