
ಮೊಹಾಲಿ: ಬ್ಯಾಟ್ಸ್ ಮನ್ ಗಳ ಅಬ್ಬರದಿಂದ ಕಳೆದ ಎರಡು ಪಂದ್ಯಗಳಲ್ಲಿ ರನ್ ಮಳೆಯನ್ನೇ ಸುರಿಸಿರುವ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡ ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ಮೇಲೆ ಮತ್ತೊಮ್ಮೆ ಸವಾರಿ ನಡೆಸಲು ಸಜ್ಜಾಗಿದೆ. ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಚಾಲೆಂಜರ್ಸ್ ತಂಡ ಗೆದ್ದರೇ, ಪ್ಲೇ ಆಫ್ ಸುತ್ತಿಗೆ ಮತ್ತಷ್ಟು ಹತ್ತಿರವಾಗಲಿದೆ. ಆದರೆ, ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತೆ ಸುಲಭ ತುತ್ತಾಗುವುದೇ ಅಥವಾ ಸಿಡಿದು ನಿಂತು ಆರ್ ಸಿಬಿಯ ಮುಂದಿನ ಸುತ್ತಿನ ಹಾದಿಗೆ ಅಡ್ಡಿಯಾಗುವುದೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ 11 ಪಂದ್ಯಗಳ ಪೈಕಿ 6 ರಲ್ಲಿ ಜಯ 4 ರಲ್ಲಿ ಸೋಲು ಕಂಡಿದೆ. 1 ಪಂದ್ಯ ಮಳೆಯಿಂದ ರದ್ದಾಗಿದೆ. ಈ ಮೂಲಕ 12 ಅಂಕಗಳನ್ನು ಸಂಪಾದಿಸಿದೆ. ಇತ್ತೀಚಿನ ಪಂದ್ಯಗಳಲ್ಲಿ ಬೃಹತ್ ಗೆಲುವು ಕಾಣುವ ಮೂಲಕ ಅತ್ಯುತ್ತಮ ಲಯದಲ್ಲಿರುವ ವಿರಾಟ್ ಕೊಹ್ಲಿ ಪಡೆ , ಇತರೆ ತಂಡಗಳಿಗಿಂತ ಅತ್ಯುತ್ತಮ ರನ್ ರೇಟ್ ಕಾಯ್ದುಕೊಂಡಿರುವುದು ಪ್ಲಸ್ ಪಾಯಿಂಟ್ ಆಗಿದೆ.
ಇತ್ತೀಚೆಗೆ ತವರಿನಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಆರ್ ಸಿಬಿ 138 ರನ್ ಗಳ ಭರ್ಜರಿ ಜಯ ದಾಖಲಿಸಿತ್ತು. ಕ್ರಿಸ್ ಗೇಯ್ಲ್ ಶತಕ ಹಾಗೂ ಮಿಚೆಲ್ ಸ್ಪಾರ್ಕ್ ಮತ್ತು ಎಸ್. ಅರವಿಂದ್ ಅವರ ವೇಗಕ್ಕೆ ಆಟಗಾರರು ಹೀನಾಯ ಸೋಲನುಭವಿಸಿದರು. 2 ರಲ್ಲಿ ಮಾತ್ರ ಜಯ 10 ರಲ್ಲಿ ಸೋಲನುಭವಿಸಿ, ಭಾರಿ ಹಿನ್ನಡೆ ಅನುಭವಿಸಿದೆ. ಅಷ್ಟೇ ಅಲ್ಲ ಫ್ಲೇ ಆಫ್ ಸುತ್ತಿನಿಂದ ಬಹು ಬೇಗನೇ ನಿರ್ಗಮಿಸಿದ ಮೊದಲ ತಂಡವಾಗಿದೆ.
ಲಯದಲ್ಲಿ ಆರ್ ಸಿಬಿ: ಟೂರ್ನಿಯ ಆರಂಭದಲ್ಲಿ ಅಸ್ಥಿರ ಪ್ರದರ್ಶನ ನೀಡುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಂತರದ ಹಂತಗಳಲ್ಲಿ ಚೇತರಿಸಿಕೊಂಡಿತು. ಈಗ ಎಂದಿನ ತನ್ನ ಅತ್ಯುತ್ತಮ ಲಯ ಕಂಡುಕೊಂಡಿದ್ದು, ಟೂರ್ನಿಯಲ್ಲಿ ಬಲಿಷ್ಠ ತಂಡಗಳಲ್ಲಿ ಒಂದಾಗಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕ್ರಿಸ್ ಗೇಯ್ಲ್ ಶತಕ, ಮುಂಬೈ ಇಂಡಿಯನ್ಸ್ ವಿರುದ್ಧ ಎಬಿ ಡಿ ವಿಲಿಯರ್ಸ್ ಅಬ್ಬರದ ಶತಕ ತಂಡದ ಆತ್ಮ ವಿಶ್ವಾಸ ಹೆಚ್ಚಿಸಿದೆ. ಇನ್ನು ಆರಂಭದಲ್ಲಿ ದುರ್ಬಲ ವಿಭಾಗವೆನಿಸಿದ್ದ ಆರ್ ಸಿಬಿ ಅಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಸೇರ್ಪಡೆಯೊಂದಿಗೆ ಹೆಚ್ಚು ಪರಿಣಾಮಕಾರಿಯಾಗಿದೆ.
ಈಗ ಎಸ್. ಅರವಿಂದ್ ತಡವಾಗಿ ಅವಕಾಶ ಪಡೆದರೂ ಉತ್ತಮ ದಾಳಿ ಸಂಘಟಿಸಿ ಎದುರಾಳಿ ದಾಂಡಿಗರ ಬೆನ್ನೆಲುಬು ಮುರಿಯುತ್ತಿರುವುದು ತಂಡದ ಬಲ ಹೆಚ್ಚಿಸಿದೆ.
ಇತ್ತೀಚಿನ ಪಂದ್ಯಗಳಲ್ಲಿ ಆರಂಭಿಕ ಮೂವರು ಬ್ಯಾಟ್ಸ್ ಮನ್ ಗಳ ಅಬ್ಬರಕ್ಕೆ ಎದುರಾಳಿ ಬೌಲರ್ ಗಳು ನರಳಿದ್ದಾರೆ. ಈ ಪಂದ್ಯದಲ್ಲೂ ಆ ಆಟಗಾರರಿಂದ ಸ್ಫೋಟಕ ಆಟದ ನಿರೀಕ್ಷೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಮಂದೀಪ್ ಸಿಂಗ್ ಹಾಗೂ ಸರ್ಪ್್ರಾಜ್ ಖಾನ್ ಭರವಸೆ ಮೂಡಿಸಿದ್ದಾರೆ. ದಿನೇಶ್ ಕಾರ್ತಿಕ್ ಲಯ ಕಂಡುಕೊಂಡರೆ ಆರ್ ಸಿಬಿ ರನ್ ವೇಗಕ್ಕೆ ಬ್ರೇಕ್ ಹಾಕಲು ಬೌಲರ್ ಗಳ ಪರದಾಟ ಮುಂದುವರಿಯಲಿದೆ.
ಇನ್ನು ಟೂರ್ನಿಯಲ್ಲಿ ಅತಿ ಹೆಚ್ಚುರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ 7ಆಟಗಾರರಲ್ಲಿ ಆರ್ ಸಿಬಿಯ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.
ಡಿವಿಲಿಯರ್ಸ್ ಅನ್ನು 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಸುವ ಪ್ರಯೋಗ ಫಲ ನೀಡಿದೆ. ಒಟ್ಟಿನಲ್ಲಿ ತಂಡ ಅತ್ಯುತ್ತಮ ಸಮತೋಲನ ಪಡೆದುಕೊಂಡು ಪ್ಲೇ ಆಫ್ ಸುತ್ತಿಗೆ ಪ್ರವೇಶಿಸುವ ವಿಶ್ವಾಸದಲ್ಲಿದೆ.
ಶೋಚನೀಯ ಸ್ಥಿತಿ: ಸತತ ಸೋಲಿನಿಂದ ಕಂಗೆಟ್ಟಿರುವ ಕಿಂಗ್ಸ್ ಇಲೆವೆನ್ ಮಾನಸಿಕವಾಗಿ ಒತ್ತಡದಲ್ಲಿದೆ. ಕಳೆದ ಪಂದ್ಯದಲ್ಲಿ ಸನ್ ರೈಸರ್ಸ್ ವಿರುದ್ಧ ಅಂತಿಮ ಕ್ಷಣದವರೆಗೂ ಹೋರಾಟ ನೀಡಿದರೂ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ.
ಡೇವಿಡ್ ಮಿಲ್ಲರ್ ಅವರ ಸ್ಪೋಟಕ ಬ್ಯಾಟಿಂಗ್ ಗೆ ಉತ್ತಮ ಸಾಥ್ ನೀಡುವಂತವರು ಯಾರು ಇಲ್ಲ. ನಾಯಕ ಜಾರ್ಜ್ ಬೇಯ್ಲಿ, ಮುರುಳಿ ವಿಜಯ್, ಗ್ಲೆನ್ ಮ್ಯಾಕ್ಸ್ ವೆಲ್, ಸೇರಿದಂತೆ ಘಟಾನುಘಟಿ ಆಟಗಾರರು ನೆಲ ಕಚ್ಚಿರುವುದು ತಂಡದ ಕಳಪೆ ಆಟ ಪ್ರದರ್ಶನಕ್ಕೆ ಕಾರಣ.
ಸೆಹವಾಗ್, ಮುರುಳಿ ವಿಜಯ್, ಶಾನ್ ಮಾರ್ಷ್ ಹಾಗೂ ಮನನ್ ವೋಹ್ರಾ ಆರಂಭಿಕರಾಗಿ ಕಣಕ್ಕಿಳಿದರೂ ತಂಡಕ್ಕೆ ಅನುಕೂಲವಾಗಿಲ್ಲ.
ಬೌಲಿಂಗ್ ವಿಭಾಗದಲ್ಲಿ ಸಂದೀಪ್ ಶರ್ಮಾ ಹಾಗೂ ಅನುರೀತ್ ಸಿಂಗ್ ಅತ್ಯುತ್ತಮ ಪ್ರದರ್ಶನ ನೀಡಿದರು. ಆಸ್ಟ್ರೇಲಿಯಾದ ಆಟಗಾರರಾದ ಮಿಚೆಲ್ ಜಾನ್ಸನ್ ಹಾಗೂ ಶಾನ್ ಮಾರ್ಷ್ ವೆಸ್ಟ್ ಇಂಡೀಸ್ ಪ್ರವಾಸದ ತಯಾರಿಗಾಗಿ ತವರಿಗೆ ಮರಳಿದ್ದಾರೆ. ಇದು ತಂಡದ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ.
Advertisement