
ನವದೆಹಲಿ: ಮುಂದಿನ ತಿಂಗಳು ನಡೆಯಲಿರುವ ಫಿಫಾ ವಿಶ್ವಕಪ್ 2018ರ ಅರ್ಹತಾ ಸುತ್ತಿನ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಆಟಗಾರರ ಪಟ್ಟಿಯನ್ನು ಕೋಚ್ ಸ್ಟೀಫನ್ ಕಾನ್‌ಸ್ಟಾಂಟೀನ್ ಬಿಡುಗಡೆ ಮಾಡಿದ್ದಾರೆ.
ಭಾರತ ತಂಡ ಮೊದಲ ಪಂದ್ಯವನ್ನು ಜೂನ್ 11ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಓಮನ್ ವಿರುದ್ಧ ಸೆಣಸಲಿದ್ದು, ನಂತರ ಜೂನ್ 16ರಂದು ಎರಡನೇ ಪಂದ್ಯದಲ್ಲಿ ಗುಹಮ್ ವಿರುದ್ಧ ಅದರ ತವರಿನ ಅಂಗಣದಲ್ಲಿ ಆಡಲಿದೆ.
ಈ ಮಹತ್ವದ ಪಂದ್ಯಗಳಿಗೆ ಬುಧವಾರ 38 ಆಟಗಾರರ ಸಂಭಾವ್ಯರ ಪಟ್ಟಿ ಬಿಡುಗಡೆ ಮಾಡಿದೆ. ನಂತರ 26 ಆಟಗಾರರ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುವುದು ಎಂದು ಎನ್‍ಡಿಟಿವಿ ವರದಿ ಮಾಡಿದೆ. ಐ-ಲೀಗ್ ಟೂರ್ನಿ ಮುಕ್ತಾಯಕ್ಕೂ ಮುನ್ನ ಅಂತಿಮ ತಂಡವನ್ನು ಆಯ್ಕೆ ಮಾಡಲಾಗುವುದು.
ತಂಡ ಆಯ್ಕೆಯಾದ ನಂತರ ಜೂನ್ 4ರಿಂದ ಬೆಂಗಳೂರಿನಲ್ಲಿ ತರಬೇತಿ ಶಿಬಿರ ಆರಂಭಿಸಲಾಗುವುದು. ನಮಗೆ ಅಗತ್ಯವಿದ್ದ ವೇದಿಕೆ ಈಗ ಸಿಕ್ಕಿದೆ. ಭಾರತ ತಂಡ ಈಗ ಏಷ್ಯಾದಲ್ಲಿನ ಪ್ರಬಲ ತಂಡಗಳೊಂದಿಗೆ ಸೆಣಸಲು ಸಜ್ಜಾಗಿದೆ. ಇದು ಪ್ರಬಲ ತಂಡಗಳು ಪರಸ್ಪರ ಸೆಣಸುವ ವೇದಿಕೆಯಾಗಿದೆ. ಈ ಹಂತದಲ್ಲಿ ಆಡುವುದರಿಂದ ತಂಡದ ಮೇಲೆ ಜವಾಬ್ದಾರಿ ಹೆಚ್ಚಲಿದೆ ಎಂದು ಸ್ಟೀಫನ್ ತಿಳಿಸಿದರು.
Advertisement