ಗೆದ್ದ ಆರ್‍ಸಿಬಿಗೆ ಚಿಗುರಿದ ಕನಸು

ಹೆಗಲ ಮೇಲಿನ ಭಾರವನ್ನು ಮತ್ತೊಮ್ಮೆ ಸಮರ್ಥವಾಗಿ ಹೊತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆದ ಎಬಿ ಡಿವಿಲಿಯರ್ಸ್ ಹಾಗೂ ಇವರಿಗೆ ಅತ್ಯುತ್ತಮ ಸಾಥಿಯಾದ...
ಜಯದ ಸಂಭ್ರಮಾಚರಣೆಯಲ್ಲಿ ಆರ್ಸಿಬಿ ತಂಡ
ಜಯದ ಸಂಭ್ರಮಾಚರಣೆಯಲ್ಲಿ ಆರ್ಸಿಬಿ ತಂಡ

ಪುಣೆ: ಹೆಗಲ ಮೇಲಿನ ಭಾರವನ್ನು ಮತ್ತೊಮ್ಮೆ ಸಮರ್ಥವಾಗಿ ಹೊತ್ತು ದಿಟ್ಟ ಹೆಜ್ಜೆಗಳೊಂದಿಗೆ ಮುನ್ನಡೆದ ಎಬಿ ಡಿವಿಲಿಯರ್ಸ್ ಹಾಗೂ ಇವರಿಗೆ ಅತ್ಯುತ್ತಮ ಸಾಥಿಯಾದ ಮಂದೀಪ್ ಸಿಂಗ್ರ ಅಬ್ಬರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭೂತಪೂರ್ವ ಗೆಲವು ತಂದುಕೊಟ್ಟಿದೆ.

ಈ ಇಬ್ಬರ ಸಾಹಸಮಯ ಬ್ಯಾಟಿಂಗ್ ನಿಂದಾಗಿ 8ನೇ ಆವೃತ್ತಿಯ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 71 ರನ್ ಗಳ ಅಂತರದಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಸೋಲುಣಿಸಿ ಮುಂದಡಿ ಇಟ್ಟಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗೆಲ್ಲಲು 181 ರನ್ ಗಳ ಗುರುತರ ಸವಾಲು ಪಡೆದಿದ್ದ ರಾಜಸ್ಥಾನ ರಾಯಲ್ಸ್ ಗೆ 19 ಓವರುಗಳಲ್ಲಿ 109 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಸೋಲಿನೊಂದಿಗೆ ಮಾಜಿ ಚಾಂಪಿಯನ್ ರಾಜಸ್ಥಾನ ತಂಡ ಈ ಆವೃತ್ತಿಯ ಐಪಿಎಲ್‍ನಲ್ಲಿ ತನ್ನ ಹೋರಾಟಕ್ಕೆ ತೆರೆ ಎಳೆದುಕೊಂಡಿತು.

ಆರಂಭಿಕ ಅಜಿಂಕ್ಯ ರಹಾನೆ 39 ಎಸೆತಗಳಲ್ಲಿ 4 ಬೌಂಡರಿಗಳಿದ್ದ 42 ರನ್‍ಗಳಿಸಿದ್ದೇ ತಂಡದ ಪರ ವೈಯಕ್ತಿಕ ಗರಿಷ್ಠ ಮೊತ್ತವಾಯಿತು. ಮಧ್ಯಮ ಕ್ರಮಾಂಕದ ಬ್ಯಾಟ್ ಮನ್ ಗಳು ಪೂರ್ಣ ಕೈಕೊಟ್ಟರು. ಮುಖ್ಯವಾಗಿ ಆರ್‍ಸಿಬಿ ಬೌಲರ್ ಗಳು ಅತ್ಯಂತ ಕರಾರುವಾಕ್ ದಾಳಿ ನಡೆಸಿ ಎದುರಾಳಿ ಬ್ಯಾಟ್ ಮನ್ ಗಳಿಗೆ ಎಚ್ಚೆತ್ತುಕೊಳ್ಳಲು ಅವಕಾಶವನ್ನೇ ನೀಡಲಿಲ್ಲ. ಅಧಿಕಾರಯುತ ಗೆಲವು ಸಂಪಾದಿಸಿದ ಆರ್‍ಸಿಬಿ ಆಟಗಾರರು ಶುಕ್ರವಾರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದ್ದಾರೆ. ಈ ಪಂದ್ಯದ ವಿಜೇತರು, ಮೇ 24ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿದ್ದಾರೆ.

ಡಿವಿಲಿಯರ್ಸ್-ಮಂದೀಪ್ ಅಬ್ಬರ ಬೃಹತ್ ಮೊತ್ತ ಪೇರಿಸಿದ ಆರ್‍ಸಿಬಿ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರುಗಳಲ್ಲಿ 4 ವಿಕೆಟ್ ನಷ್ಟಕ್ಕೆ 180 ರನ್ ಗಳ ಬೃಹತ್ ಮೊತ್ತ ಸಂಪಾದಿಸಿತು. ಬೃಹತ್ ಮೊತ್ತ ಪೇರಿಸಿ ಎದುರಾಳಿ ತಂಡದ ಮುಂದೆ ಕಠಿಣ ಸವಾಲು ನಿಲ್ಲಿಸಿ ಒತ್ತಡ ಹಾಕುವ ಉದ್ದೇಶದಿಂದ ಆರ್‍ಸಿಬಿ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡಿದ್ದರು.

ಅದೇ ರೀತಿ, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವನ್ ಸ್ಮಿತ್ ಸಹ, ಟಾಸ್ ಗೆ ಮುನ್ನ ನಾವೂ ಕೂಡ ಮೊದಲಿಗೆ ಬ್ಯಾಟ್ ಮಾಡಲು ಬಯಸಿದ್ದೇವು ಎಂದಿದ್ದರು. ಆದರೆ, ಟಾಸ್ ಗೆಲ್ಲುವ ಅದೃಷ್ಟ ಕೊಹ್ಲಿಗೆ ಇದ್ದಿದ್ದರಿಂದ ಸ್ಮಿತ್‍ರ ಈ ಆಸೆ ಈಡೇರಲಿಲ್ಲ. ಆದರೆ, ಆರ್‍ಸಿಬಿ ಇನಿಂಗ್ಸ್ ಆರಂಭಿಸಿದ ಕ್ರಿಸ್ ಗೇಯ್ಲ್ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಡಲು ವಿಫಲರಾದರು. ತಂಡದ ಮೊತ್ತ 6 ಓವರುಗಳಲ್ಲಿ 41 ರನ್ ಗಳಾದಾಗ ಗೇಯ್ಲ್ ಮೊದಲ ಬಲಿಯಾದರು. ಮಧ್ಯಮ ವೇಗಿ ಧವಳ್ ಕುಲಕರ್ಣಿ ನೇರವಾಗಿ ಸ್ಟಂಪ್ ಮೇಲೆ ಎಸೆದ ಚೆಂಡನ್ನು ದಂಡಿಸಲು ಅಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾದಾಗ ಬೇಲ್ಸ್ ಮೇಲಕ್ಕೆ ಚಿಮ್ಮಿತ್ತು. ಗೇಯ್ಲ್ 26 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸೇರಿದಂತೆ 27 ರನ್ಗಳಿಸಿ ನಿರ್ಗಮಿಸಿದರು.

ಆರಂಭದ ಈ ಆಘಾತದಿಂದ ಎಚ್ಚೆತ್ತುಕೊಳ್ಳುವ ಮುನ್ನವೇ ರಾಯಲ್ ಚಾಲೆಂಜರ್ಸ್ ಗೆ ಮತ್ತೊಂದು ಹಾನಿಯುಂಟಾಯಿತು. ತಂಡದ ಖಾತೆಗೆ ಮತ್ತೆ ಕೇವಲ 5 ರನ್ ಸೇರುವಷ್ಟರಲ್ಲಿ ಕೊಹ್ಲಿ ಕೂಡ ಕೆಟ್ಟದಾಗಿ ವಿಕೆಟ್ ಒಪ್ಪಿಸಿದರು. ಅವರು 18 ಎಸೆತಗಳನ್ನು ಎದುರಿಸಿದರೂ, ಒಂದೂ ಬೌಂಡರಿ ಇಲ್ಲದ 12 ರನ್ ಗಳಿಸಲಷ್ಟೇ ಶಕ್ತರಾದರು. ಮೂರನೇ ವಿಕೆಟ್‍ಗೆ ಜೊತೆಯಾದ ಎಬಿ ಡಿವಿಲಿಯರ್ಸ್ ಮತ್ತು ಮಂದೀಪ್ ಸಿಂಗ್, ಆರಂಭದಲ್ಲಿ ಸ್ವಲ್ಪ ಎಚ್ಚರಿಕೆಯ ಆಟಕ್ಕೆ ಕುದುರಿಕೊಂಡರು. ಪರಿಣಾಮ ಆರ್‍ಸಿಬಿ ಮೊತ್ತ ಮೊದಲ 10 ಓವರುಗಳಲ್ಲಿ 60 ರನ್‍ಗಳಷ್ಟೇ ಆಗಿತ್ತು. ನಂತರ ತಂಡದ ಸ್ಥಿತಿ ಉತ್ತಮಗೊಳ್ಳುತ್ತಲೇ ಡಿವಿಲಿಯರ್ಸ್ ಮತ್ತು ಮಂದೀಪ್, ವೀರಾವೇಶದ ಬ್ಯಾಟಿಂಗ್‍ಗೆ ಮುಂದಾದರು. ಪರಿಣಾಮವಾಗಿ ಮೈದಾನದ ಮೂಲೆಮೂಲೆಗೂ ರನ್ ಹರಿಯತೊಡಗಿತು. ಅದರಲ್ಲೂ ಡಿವಿಲಿಯರ್ಸ್ ಅಬ್ಬರ ತಡೆಯುವ
ಶಕ್ತಿ ರಾಜಸ್ಥಾನದ ಯಾವ ಬೌಲರ್‍ಗಳಲ್ಲೂ ಇಲ್ಲದಾಯಿತು. ಅಂತಿಮವಾಗಿ ಅವರು, 38 ಎಸೆತಗಳಲ್ಲಿ 4 ಬೌಂಡರಿ ಮತ್ತು 4 ಸಿಕ್ಸರ್ ಹೊಂದಿದ್ದ 66 ರನ್‍ಗಳಿಸಿದಾಗ ರನೌಟ್ ಬಲೆಗೆ ಬಿದ್ದರು. ಮೂರನೇ ವಿಕೆಟ್ ಪಾಲುದಾರಿಕೆ ಆಟದಲ್ಲಿ ಡಿವಿಲಿಯರ್ಸ್ ಮತ್ತು ಮಂದೀಪ್ ಸೇರಿಸಿದ ಕೇವಲ 67 ಎಸೆತಗಳಲ್ಲಿನ 113 ರನ್‍ಗಳು ಬೆಂಗಳೂರು ತಂಡಕ್ಕೆ ಸುಭದ್ರ ನೆಲೆ ಒದಗಿಸಿತು. ಮತ್ತೊಂದೆಡೆ ಮಂದೀಪ್ ಅಬ್ಬರ ಕೊನೆಯವರೆಗೂ ಮುಂದುವರಿಯಿತು. ಅವರು 34 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್‍ಗಳಿದ್ದ 54 ರನ್‍ಗಳಿಸಿ ಅಜೇಯರಾಗುಳಿದರು. ಕೊನೆಯ 10 ಓವರುಗಳಲ್ಲಿ ಆರ್‍ಸಿಬಿ 120 ರನ್ ಸಂಪಾದಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com