ಉದ್ದೀಪನ ಮದ್ದು ಸೇವನೆ: 4 ಲಿಫ್ಟರ್‍ಗಳ ಅಮಾನತು

ಇತ್ತೀಚೆಗೆ ನಡೆದಿದ್ದ ವಿವಿಧ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಉದ್ದೀಪನಾ ಮದ್ದು ಸೇವಿಸಿ ಸ್ಪರ್ಧೆಗಿಳಿದಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ...
ಉದ್ದೀಪನಾ ಮದ್ದು
ಉದ್ದೀಪನಾ ಮದ್ದು

ನವದೆಹಲಿ: ಇತ್ತೀಚೆಗೆ ನಡೆದಿದ್ದ ವಿವಿಧ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಉದ್ದೀಪನಾ ಮದ್ದು ಸೇವಿಸಿ ಸ್ಪರ್ಧೆಗಿಳಿದಿದ್ದ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ವೇಟ್ ಲಿಫ್ಟರ್‍ಗಳನ್ನು ಎರಡು ವರ್ಷಗಳವರೆಗೆ ನಿಷೇಧಿಸಿ, ಭಾರತೀಯ ವೇಟ್ ಲಿಫ್ಟಿಂಗ್ ಒಕ್ಕೂಟ (ಐಡಬ್ಲ್ಯುಎಫ್) ಆದೇಶ ಹೊರಡಿಸಿದೆ.

ದೆಹಲಿಯ ಸುನಿಲ್ ಕುಮಾರ್, ಮಧ್ಯಪ್ರದೇಶದ ಧರ್ಮೇಂದ್ರ  ಪಾಲಿವಾಲ್, ಮಣಿಪುರದ ಸುಮತಿ ದೇವಿ ಹಾಗೂ ದೆಹಲಿಯ ಪೂಜಾ ಶಿಕ್ಷೆಗೊಳಗಾದವರು.

ಕಳೆದ ವಾರವಷ್ಟೇ, ಐಡಬ್ಲ್ಯೂಎಫ್ ಎಂಟು ಮಂದಿ ವೇಟ್ ಲಿಫ್ಟಿಂಗ್ ಕೋಚ್ ಗಳನ್ನು ಅಮಾನತುಗೊಳಿಸಿತ್ತು. ತಮ್ಮ ವಿಶ್ರಾಂತಿ ಕೊಠಡಿಗಳಲ್ಲಿ ನಿಷೇಧಿತ ರಾಸಾಯನಿಕ ವಸ್ತುಗಳನ್ನು ಹೊಂದಿದ್ದ ಆರೋಪಡಿ ಈ ಶಿಕ್ಷೆಯನ್ನು ವಿಧಿಸಲಾಗಿತ್ತು. ಇದಾಗಿ, ಕೆಲವೇ ದಿನಗಳಲ್ಲಿ ನಾಲ್ವರು ಕ್ರೀಡಾಳುಗಳಿಗೆ ನಿಷೇಧ  ಹೇರಿರುವುದು ಎಲ್ಲರ ಹುಬ್ಬೇರಿಸಿದೆ ಎಂದು ಡಿಎನ್‍ಎ ವರದಿ ಮಾಡಿದೆ.

ಕಳೆದ ವರ್ಷದ ಹಿರಿಯರ ರಾಷ್ಟ್ರೀಯ ಚಾಂಪಿಯನ್‍ಶಿಪ್ ನಲ್ಲಿ ಸುನಿಲ್ 94 ಕೆಜಿ  ವಿಭಾಗದಲ್ಲಿ ಚಿನ್ನ ಗೆದ್ದಿದ್ದರು. ಪಾಲಿವಾಲ್ ಅವರು 105 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದರು. ದೇವಿ ಅವರು, ಕಳೆದ ವರ್ಷಾಂತ್ಯಕ್ಕೆ ನಡೆದಿದ್ದ  ರಾಷ್ಟ್ರೀಯ ಕ್ರೀಡಾಕೂಟದಲ್ಲಿ 75 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ ಗೆದ್ದಿದ್ದರು.

ಅದಕ್ಕೂ ಹಿಂದೆ, 2002ರಲ್ಲಿ ಹೈದರಾಬಾದ್ ನಲ್ಲಿ ನಡೆದಿದ್ದ ಆಫ್ರೋ-ಏಷ್ಯನ್ ಕ್ರೀಡಾಕೂಟದಲ್ಲಿ ಕಂಚು ಗೆದ್ದ ಹಿರಿಮೆ ಅವರಿಗಿದೆ. ಆದರೆ, ದೇವಿ ಅವರು ಇತ್ತೀಚೆಗೆ  ಪಾಲ್ಗೊಂಡಿದ್ದ ಆಲ್ ಇಂಡಿಯಾ ಪೊಲೀಸ್ ಗೇಮ್ಸ್ ನಲ್ಲಿ ಉದ್ದೀಪನಾ ಮದ್ದು ಸೇವಿಸಿರುವುದು ಸಾಬೀತಾಗಿದೆ. ಮುಂದಿನ ವರ್ಷದ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ, ಪಟಿಯಾಲಾದಲ್ಲಿ ಈಗಾಗಲೇ  ಆರಂಭಗೊಂಡಿರುವ ರಾಷ್ಟ್ರೀಯ ವೇಟ್ ಲಿಫ್ಟರ್ ಗಳ ತರಬೇತಿ ಶಿಬಿರದಲ್ಲಿ ಸುನಿಲ್ ಕುಮಾರ್ ಹಾಗೂ ಧರ್ಮೇಂದ್ರ ಪಾಲಿವಾಲ್ ಅವರು ಪಾಲ್ಗೊಂಡಿದ್ದಾರೆ. ಇದೀಗ ಇವರ  ಕ್ರೀಡಾಭವಿಷ್ಯ ಅನಿಶ್ಚಿತತೆಯತ್ತ ಜಾರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com