ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ

ರಣಜಿ: ಆತಿಥೇಯರಿಗೆ ಗೆಲವಿಗೆ 358 ರನ್ ಗುರಿ. ಚೊಚ್ಚಲ ಜಯದ ಹೊಸ್ತಿಲಲ್ಲಿ ವಿನಯ್ ಪಡೆ

ನಾಯಕ ವಿನಯ್ ಕುಮಾರ್ ಹಾಗೂ ಶ್ರೀನಾಥ್ ಅರವಿಂದ್ ಅವರ ಬೌಲಿಂಗ್ ಕೈ ಚಳಕ ಹಾಗೂ ರಾಬಿನ್ ಉತ್ತಪ್ಪನವರ ಆಕರ್ಷಕ ಶತಕದ ಸಹಾಯದಿಂದಾಗಿ

ಜೈಪುರ: ನಾಯಕ ವಿನಯ್ ಕುಮಾರ್ ಹಾಗೂ ಶ್ರೀನಾಥ್ ಅರವಿಂದ್ ಅವರ ಬೌಲಿಂಗ್ ಕೈ ಚಳಕ ಹಾಗೂ ರಾಬಿನ್ ಉತ್ತಪ್ಪನವರ ಆಕರ್ಷಕ ಶತಕದ ಸಹಾಯದಿಂದಾಗಿ ಪ್ರವಾಸಿ ಕರ್ನಾಟಕ ತಂಡ ರಾಜಸ್ತಾನ ವಿರುದ್ಧದ ರಣಜಿ ಪಂದ್ಯದಲ್ಲಿ ಜಯ ಸಾಧಿಸಿದರೇ, ಪ್ರಸಕ್ತ ರಣಜಿ ಋತುವಿನಲ್ಲಿ ಚೊಚ್ಚಸ ಜಸ ಸಾಧಿಸಿದಂತಾಗುತ್ತದೆ

ರಾಬಿನ್ ಉತ್ತಪ್ಪ ಸಿಡಿಸಿದ ಸ್ಫೋಟಕ ಶತಕ, ಅಭಿಷೇಕ್ ರೆಡ್ಡಿ ಗಳಿಸಿದ ಚೊಚ್ಚಲ ಅರ್ಧಶತಕ ಮತ್ತು ಬೌಲರ್‌ಗಳ ಭರ್ಜರಿ ಪ್ರದರ್ಶನದ ಬೆನ್ನೇರಿದ ಹಾಲಿ ಚಾಂಪಿಯನ್ ಕರ್ನಾಟಕ ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಟೂರ್ನಿಯಲ್ಲಿ ಮೊದಲ ಗೆಲುವಿನ ಹಾದಿಯಲ್ಲಿದೆ.

ಇಲ್ಲಿನ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆತಿಥೇಯ ರಾಜಸ್ಥಾನ ವಿರುದ್ಧದ ಎ ಗುಂಪಿನ ತನ್ನ ಐದನೇ ಪಂದ್ಯದಲ್ಲಿ ಕರ್ನಾಟಕ ಬಿಗಿ ಹಿಡಿತ ಸಾಧಿಸಿದೆ. ಕರ್ನಾಟಕ ಒಡ್ಡಿರುವ 358 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನತ್ತಿರುವ ರಾಜಸ್ಥಾನ, ದಿನದಂತ್ಯಕ್ಕೆ 15 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 42 ರನ್ ಗಳಿಸಿದೆ.

ಅಂತಿಮ ದಿನದಾಟದಲ್ಲಿ ರಾಜ್ಯದ ಗೆಲುವಿಗೆ ಏಳು ವಿಕೆಟ್ ಬೇಕಿದ್ದು, ಹಾಲಿ ಚಾಂಪಿಯನ್ನರು ಸಾಲಿನ ಮೊದಲ ಜಯವನ್ನು ಎದುರು ನೋಡುತ್ತಿದ್ದಾರೆ.

ಆತಿಥೇಯರಿಗೆ ಅರವಿಂದ್ ಆಘಾತ 358 ರನ್‌ಗಳ ಕಠಿಣ ಗುರಿಯ ಮುಂದೆ ದ್ವಿತೀಯ ಸರದಿ ಆರಂಭಿಸಿದ ರಾಜಸ್ಥಾನಕ್ಕೆ ಎಡಗೈ ಮಧ್ಯಮ ವೇಗಿ ಎಸ್.ಅರವಿಂದ್ ಆಘಾತವಿಕ್ಕಿದರು. ತಮ್ಮ 3ನೇ ಓವರ್‌ನಲ್ಲಿ ವಿನೀತ್ ಸಕ್ಸೇನಾ (6) ಅವರ ವಿಕೆಟ್ ಪಡೆದ ಅರವಿಂದ್, ಮುಂದಿನ ಓವರ್‌ನಲ್ಲಿ ವೈಭವ್ ದೇಶಪಾಂಡೆ ಅವರನ್ನು ಶೂನ್ಯಕ್ಕೆ ಪೆವಿಲಿಯನ್‌ಗಟ್ಟಿದರು. ಇದಾದ ಬಳಿಕ ಬಲಗೈ ಮಧ್ಯಮ ವೇಗಿ ಡೇವಿಡ್ ಮಥಾಯಿಸ್, ತಮ್ಮ ಮೊದಲ ಓವರ್‌ನ ಮೊದಲ ಎಸೆತದಲ್ಲೇ ರಾಜಸ್ಥಾನ ತಂಡದ ನಾಯಕ ಅಶೋಕ್ ಮೆನಾರಿಯಾ (9) ಅವರನ್ನು ಕ್ಲೀನ್‌ಬೌಲ್ಡ್ ಮಾಡಿ ತಂಡಕ್ಕೆ ಮೂರನೇ ಯಶಸ್ಸು ತಂದಿತ್ತರು.

ಕರ್ನಾಟಕಕ್ಕೆ ಆರಂಭಿಕ ಹೊಡೆತ ಇದಕ್ಕೂ ಮೊದಲು 39 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಕರ್ನಾಟಕ ಆರಂಭಿಕ ಆಘಾತ ಎದುರಿಸಿತು. ಅಭಿಷೇಕ್ ರೆಡ್ಡಿ ಜತೆ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್ (8), ಸಿಕ್ಸರ್ ಬಾರಿಸುವ ಯತ್ನದಲ್ಲಿ ಔಟಾದರು. ಪ್ರಥಮ ಇನಿಂಗ್ಸ್‌ನಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ್ದ ಆರ್.ಸಮರ್ಥ್ 2ನೇ ಇನಿಂಗ್ಸ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದರು. ಆದರೆ 6 ರನ್ ಗಳಿಸಿದ್ದ ವೇಳೆ ರಜತ್ ಭಾಟಿಯಾ ಎಸೆತದಲ್ಲಿ ಸಮರ್ಥ್ ಬ್ಯಾಟ್‌ನ ಒಳ ಅಂಚಿಗೆ ಬಡಿದ ಚೆಂಡು ವಿಕೆಟ್ ಎಗರಿಸಿತು.

ಅಭಿಷೇಕ್ ಚೊಚ್ಚಲ ಅರ್ಧಶತಕ ಆರಂಭಿಕ ಆಘಾತಕ್ಕೊಳಗಾಗಿದ್ದ ತಂಡವನ್ನು ಆಧರಿಸಿದ್ದು ಅಭಿಷೇಕ್ ರೆಡ್ಡಿ ಮತ್ತು ಅನುಭವಿ ರಾಬಿನ್ ಉತ್ತಪ್ಪ. ಈ ಬಲಗೈ ಜೋಡಿ 3ನೇ ವಿಕೆಟ್‌ಗೆ 114 ಎಸೆತಗಳಲ್ಲಿ 101 ರನ್ ಸೇರಿಸಿತು. ಈ ಪಂದ್ಯದ ಮೂಲಕ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ ಅಭಿಷೇಕ್ ರೆಡ್ಡಿ ಆಡಿದ 2ನೇ ಇನಿಂಗ್ಸ್‌ನಲ್ಲೇ ಚೊಚ್ಚಲ ಅರ್ಧಶತಕ ಗಳಿಸಿ ಮಿಂಚಿದರು.

ರಾಬಿನ್ ಉತ್ತಪ್ಪ ಶತಕದ ಮಿಂಚು ಸವಾಯ್ ಮಾನ್‌ಸಿಂಗ್ ಮೈದಾನದಲ್ಲಿ ಕರ್ನಾಟಕದ ಇನಿಂಗ್ಸ್‌ಗೆ ಬಲ ತುಂಬಿದ್ದು ಸ್ಫೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ. 4ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದ ಕೊಡಗಿನ ವೀರ, ಅರ್ಧಶತಕ ಗಳಿಸುತ್ತಲೇ ತಮ್ಮ ನೈಜ ಆಕ್ರಮಣಕಾರಿ ಆಟಕ್ಕಿಳಿದರು. 98 ರನ್ ಗಳಿಸಿದ್ದಾಗ ಎಡಗೈ ಸ್ಪಿನ್ನರ್ ಅಜಯ್ ಸಿಂಗ್ ಅವರ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ 18ನೇ ಶತಕದ ಸಂಭ್ರಮವನ್ನಾಚರಿಸಿದರು. ಇದು ಪ್ರಸಕ್ತ ಸಾಲಿನಲ್ಲಿ ರಾಬಿನ್ ಗಳಿಸಿದ ಮೊದಲ ಶತಕ. 98 ಎಸೆತಗಳಲ್ಲಿ ಮೂರಂಕಿಯ ಮೊತ್ತ ತಲುಪಿದ ರಾಬಿನ್, 124 ಎಸೆತಗಳಲ್ಲಿ 150ರ ಗಡಿ ದಾಟಿ ಅಂತಿಮವಾಗಿ 128 ಎಸೆತಗಳಲ್ಲಿ 25 ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಹಿತ 160 ರನ್ ಗಳಿಸಿದರು. ಈ ಮೂಲಕ ಪಂದ್ಯ ವೀಕ್ಷಿಸುತ್ತಿದ್ದ ರಾಷ್ಟ್ರೀಯ ಆಯ್ಕೆ ಸಮಿತಿ ಮುಖ್ಯಸ್ಥ ಸಂದೀಪ್ ಪಾಟೀಲ್ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.

4ನೇ ವಿಕೆಟ್‌ಗೆ ಸ್ಟುವರ್ಟ್ ಬಿನ್ನಿ ಜತೆ 51 ರನ್ ಸೇರಿಸಿದ ಉತ್ತಪ್ಪ 5ನೇ ವಿಕೆಟ್‌ಗೆ ಉಪನಾಯಕ ಸಿ.ಎಂ.ಗೌತಮ್ ಜತೆ 97 ರನ್‌ಗಳ ಜತೆಯಾಟವಾಡಿದರು. ಉತ್ತಪ್ಪ ಆರ್ಭಟದಿಂದಾಗಿ ಕರ್ನಾಟಕ ಎರಡನೇ ಇನಿಂಗ್ಸ್‌ನಲ್ಲಿ 63 ಓವರ್‌ಗಳಲ್ಲಿ 5 ವಿಕೆಟ್‌ಗೆ 318 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.

ಜೈಪುರದಲ್ಲಿ ಅರಳಿದ ಕನ್ನಡ ಬಾವುಟ ಕನ್ನಡ ರಾಜ್ಯೋತ್ಸವದ ದಿನವಾದ ಭಾನುವಾರ ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಕನ್ನಡದ ಕಹಳೆ ಮೊಳಗಿದ್ದು ವಿಶೇಷವಾಗಿತ್ತು. 3ನೇ ದಿನದಾಟದ ಆರಂಭಕ್ಕೂ ಮುನ್ನ ಕರ್ನಾಟಕದ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಬೌಂಡರಿ ಗೆರೆಯ ಬಳಿಯಲ್ಲಿದ್ದ ಸ್ಥಳೀಯ ಬಾಲ್‌ಬಾಯ್‌ಗಳು ಕನ್ನಡ ರಾಜ್ಯೋತ್ಸವದ ಶುಭಾಷಯ ಕೋರಿದರು. ಆಗ ಅಚ್ಚರಿಗೊಂಡ ನಾಯಕ ವಿನಯ್ ಕುಮಾರ್, ಇಂದು ಕನ್ನಡ ರಾಜ್ಯೋತ್ಸವ ಎಂಬುದು ನಿಮಗೆ ಹೇಗೆ ಗೊತ್ತು ಎಂದು ಆ ಮಕ್ಕಳನ್ನು ಪ್ರಶ್ನಿಸಿದರು. ಆಗ ಆ ಬಾಲ್‌ಬಾಯ್‌ಗಳು ಪಕ್ಕದಲ್ಲೇ ಇದ್ದ ಕರ್ನಾಟಕ ತಂಡದ ಅಭಿಮಾನಿ ಸುಹಾಸ್ ನಾಯ್ಡುರತ್ತ ಕೈ ತೋರಿಸಿದರು. ರಾಜ್ಯ ತಂಡವನ್ನು ಸದಾ ಹಿಂಬಾಲಿಸುವ ಬೆಂಗಳೂರಿನ ಸುಹಾಸ್ ನಾಯ್ಡು ಜೈಪುರಕ್ಕೂ ಬಂದಿದ್ದು, ಬೆಳಗ್ಗೆಯೇ ಕನ್ನಡ ರಾಜ್ಯೋತ್ಸವದ ಬಗ್ಗೆ ಬಾಲ್‌ಬಾಯ್‌ಗಳಿಗೆ ತಿಳಿಸಿ ಆಟಗಾರರಿಗೆ ಶುಭಾಷಯ ಹೇಳುವಂತೆ ತಿಳಿಸಿದ್ದರು.

Related Stories

No stories found.

Advertisement

X
Kannada Prabha
www.kannadaprabha.com