ಮೆಕ್ಸಿಕನ್ ಗ್ರ್ಯಾನ್ ಪ್ರೀ ರೇಸ್ ಚಾಂಪಿಯನ್ ಶಿಪ್: ಕೊನೆಗೂ ಗೆದ್ದ ರಾಸ್ ಬರ್ಗ್

ಕಳೆದ ನಾಲ್ಕು ತಿಂಗಳಿನಿಂದ ಮರ್ಸಿಡೆಸ್ ತಂಡದ ಸಹ ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ಸತತ ವೈಫಲ್ಯ ಅನುಭವಿಸಿದ್ದ
ನಿಕೋ ರೋಸ್ ಬರ್ಗ್
ನಿಕೋ ರೋಸ್ ಬರ್ಗ್

ಮೆಕ್ಸಿಕೋ: ಕಳೆದ ನಾಲ್ಕು ತಿಂಗಳಿನಿಂದ ಮರ್ಸಿಡೆಸ್ ತಂಡದ ಸಹ ಚಾಲಕ ಲೂಯಿಸ್  ಹ್ಯಾಮಿಲ್ಟನ್ ಅವರನ್ನು ಹಿಂದಿಕ್ಕಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿ ಸತತ ವೈಫಲ್ಯ ಅನುಭವಿಸಿದ್ದ  ಜರ್ಮನ್ ಚಾಲಕ ನಿಕೋ ರಾಸ್ ಬರ್ಗ್ ಕೊನೆಗೂ ಹ್ಯಾಮಿಲ್ಟನ್ ವಿರುದ್ಧ ಯಶ ಕಂಡಿದ್ದಾರೆ.

ಅರ್ಹತಾ ಸುತ್ತಿನಲ್ಲಿ ವೇಗದ ಲ್ಯಾಪ್ ಪೂರೈಸಿ ಗ್ರಿಡ್‌ನಲ್ಲಿ ಅಗ್ರ ಸ್ಥಾನಿಯಾಗಿ ರೇಸ್ ಆರಂಭಿಸಿದ ರಾಸ್ಬರ್ಗ್, 71 ಲ್ಯಾಪ್‌ಗಳನ್ನು 1 ಗಂಟೆ, 42 ನಿಮಿಷ ಹಾಗೂ 35.038 ಸೆಕೆಂಡ್‌ಗಳಲ್ಲಿ ಪೂರೈಸಿ 25 ಅಂಕಗಳನ್ನು ಬಾಚಿಕೊಂಡರು. ರಾಸ್ಬರ್ಗ್ ಈ ವರ್ಷ ಗೆದ್ದ ನಾಲ್ಕನೇ ರೇಸ್ ಇದಾಗಿದ್ದು, ಅವರ ವೃತ್ತಿ ಬದುಕಿನ 12ನೇ ಯಶಸ್ಸಾಗಿದೆ.

ಈಗಾಗಲೇ ತಮ್ಮ ವೃತ್ತಿ ಬದುಕಿನ ಮೂರನೇ ವಿಶ್ವ ಚಾಂಪಿಯನ್‌ಷಿಪ್ ಪಟ್ಟವನ್ನು ಭದ್ರ ಪಡಿಸಿಕೊಂಡಿರುವ ಮರ್ಸಿಡೀಸ್‌ನ ಮತ್ತೊಬ್ಬ ಚಾಲಕ ಬ್ರಿಟನ್‌ನ ಲೂಯಿಸ್ ಹ್ಯಾಮಿಲ್ಟನ್ +1.954 ಸೆಕೆಂಡ್‌ಗಳ ಹಿನ್ನಡೆಯೊಂದಿಗೆ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮತ್ತೊಂದೆಡೆ ಮರ್ಸಿಡೀಸ್ ಬೆಂಬಲಿತ ವಿಲಿಯಮ್ಸ್ ತಂಡದ ಚಾಲಕ ಫಿನ್ಲೆಂಡಿನ ವಾಲ್ಟರಿ ಬೊಟಾಸ್ (+14.592) ತೃತೀಯ ಸ್ಥಾನ ಗಿಟ್ಟಿಸಿ 15 ಅಂಕಗಳನ್ನು ಪಡೆದರು.

'ಲೂಯಿಸ್ ಜತೆಗಿನ ಪೈಪೋಟಿಯ ನಡುವೆ ಈ ರೇಸ್ ಗೆದ್ದಿರುವುದು ಖುಷಿ ಕೊಟ್ಟಿದೆ. ಅವರು ಉತ್ತಮವಾಗಿ ಚಾಲನೆ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರೇಕ್ಷಕರ ಎದುರು ಸಿಕ್ಕಂತಹ ಈ ಗೆಲವು ಅತೀವ ಸಂತಸ ನೀಡಿದೆ,'' ಎಂದು ರೇಸ್ ಮುಕ್ತಾಯದ ಬಳಿಕ ಮಾತನಾಡಿದ ನಿಕೊ ತಮ್ಮ ಸಂತಸ ಹಂಚಿಕೊಂಡರು.

ರೆಡ್‌ಬುಲ್ ರೆನಲ್ಟ್ ತಂಡದ ಚಾಲಕರಾದ ಡೇನಿಲ್ ಕ್ಯಾಟ್ ಮತ್ತು ಡೇನಿಯಲ್ ರಿಕಾರ್ಡೊ ಕ್ರಮವಾಗಿ 4ನೇ ಮತ್ತು 5ನೇ ಸ್ಥಾನ ಹಂಚಿಕೊಂಡರೆ, ವಿಲಿಯಮ್ಸ್ ತಂಡದ ಚಾಲಕ ಬ್ರೆಜಿಲ್‌ನ ಫಿಲಿಪೆ ಮಾಸಾ 6ನೇ ಸ್ಥಾನ ಪಡೆಯುವಲ್ಲಿ ಸಫಲರಾದರು.

ಮೆಕ್ಸಿಕನ್ ರೇಸ್‌ನಲ್ಲಿ ಮಾಜಿ ವಿಶ್ವ ಚಾಂಪಿಯನ್ ಫೆರಾರಿ ತಂಡಕ್ಕೆ ಡಬಲ್ ನಿರಾಸೆ ಎದುರಾಯಿತು. ಫೆರಾರಿ ಚಾಲಕರಾದ ಜರ್ಮನಿಯ ಸೆಬಾಸ್ಟಿಯನ್ ವೆಟಲ್ ಹಾಗೂ ಫಿನ್ಲೆಂಡಿನ ಕಿಮಿ ರೈಕೊನೆನ್ ಸ್ಪರ್ಧೆಯಿಂದ ಹೊರ ನಡೆಯುವಂತಾದರು. ವೆಟಲ್ ಕಾರು ಅಪಘಾತಕ್ಕೀಡಾದರೆ, ರೈಕೊನೆನ್, ಪ್ರತಿಸ್ಪರ್ಧಿ ವಾಲ್ಟರಿ ಬೋಟಾಸ್ ಅವರ ಕಾರಿನೊಂದಿಗೆ ಆದ ಘರ್ಷಣೆಯಿಂದಾಗಿ ರೇಸ್‌ನಿಂದ ನಿರ್ಗಮಿಸಿದರು.

ಫೋರ್ಸ್ ಇಂಡಿಯಾಗೆ  ಹತ್ತು ಅಂಕಗಳು

ಈ ಬಾರಿ ರೇಸ್ ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಭಾರತದ ಫೋರ್ಸ್ ಇಂಡಿಯಾ ಫಾರ್ಮುಲಾ ಒನ್ ತಂಡ, ಕಂಸ್ಟ್ರಕ್ಟರ್ ವಿಭಾಗದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ತನ್ನ 5ನೇ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದೆ. ತಂಡದ ಚಾಲಕರಾದ ನಿಕೊ ಹಲ್ಕೇನ್‌ಬರ್ಗ್ ಹಾಗೂ ಸೆರ್ಗಿಯೊ ಪೆರೇಜ್ ಮೆಕ್ಸಿಕೊ ಗ್ರ್ಯಾನ್ ಪ್ರಿ ರೇಸ್‌ನಲ್ಲಿ ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನ ಪಡೆದು ಒಟ್ಟಾರೆ 10 ಅಂಕಗಳನ್ನು ತಂದುಕೊಡುವಲ್ಲಿ ಯಶ್ವಿಯಾದರು. ಇದರೊಂದಿಗೆ 112 ಅಂಕ ಪಡೆದಿರುವ ಫೋರ್ಸ್ ಇಂಡಿಯಾ 5ನೇ ಸ್ಥಾನ ಭದ್ರ ಪಡಿಸಿಕೊಂಡಿದೆ. ಸಮೀಪದ ಸ್ಪರ್ಧಿ ಲೋಟಸ್ ರೇಸಿಂಗ್ 71 ಅಂಕಗಳಿಸಿದೆ. ಈ ಪಟ್ಟಿಯಲ್ಲಿ 617 ಅಂಕ ಪಡೆದಿರುವ ಮರ್ಸಿಡೀಸ್ ಅಗ್ರ ಸ್ಥಾನ ಅಲಂಕರಿಸಿದರೆ, 374 ಅಂಕಗಳೊಂದಿಗೆ ಫೆರಾರಿ ತಂಡ 2ನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com