
ಸಾವ್ ಪಾಲೊ: ಪೋಲ್ ಪೊಸಿಷನ್ ನಲ್ಲಿ ರೇಸ್ ಗಿಳಿದು ಆಕರ್ಷಕ ಪ್ರದರ್ಶನ ನೀಡಿದ ಮರ್ಸಿಡೆಸ್ ತಂಡದ ಚಾಲಕ ನಿಕೊ ರಾಸ್‍ಬರ್ಗ್, ಸತತ ಎರಡನೇ ರೇಸ್ ಅನ್ನು ಗೆದ್ದುಕೊಂಡಿದ್ದಾರೆ.
ರೇಸ್ ನಲ್ಲಿ ರಾಸ್‍ಬರ್ಗ್ 71 ಲ್ಯಾಪ್‍ಗಳ ರೇಸ್ ಅನ್ನು 1:31:09.090 ಗಂಟೆಯಲ್ಲಿ ಮುಕ್ತಾಯಗೊಳಿಸಿ ಅಗ್ರಸ್ಥಾನ ಪಡೆದರು. ಇನ್ನು ಮರ್ಸಿಡೆಸ್‍ನ ಮತ್ತೋರ್ವ ಸ್ಟಾರ್ ಚಾಲಕ ಲೂಯಿಸ್ ಹ್ಯಾಮಿಲ್ಟನ್ ದ್ವಿತೀಯ ಸ್ಥಾನಕ್ಕೆ ತೃಪ್ತರಾದರು. ಮರ್ಸಿಡೇಸ್ ತಂಡದ ಚಾಲಕರೇ ಮತ್ತೊಮ್ಮೆ ಮೊದಲೆರಡು ಸ್ಥಾನ ಪಡೆದಿರುವ ಕಾರಣ ಚಾಂಪಿಯನ್‍ಶಿಪ್‍ಗಾಗಿನ ಸ್ಪರ್ಧೆ ಮುಂದುವರೆದಂತಾಗಿದೆ.
ಇನ್ನು ಫೆರಾರಿ ತಂಡದ ಚಾಲಕ ಸೆಬಾಸ್ಟಿಯನ್ ವೆಟಲ್ ಮೂರನೇ ಸ್ಥಾನ ಪಡೆದರೆ. ಫೆರಾರಿಯ ಮತ್ತೊಬ್ಬ ಚಾಲಕ ಕಿಮಿ ರಿಕೋನೆನ್ ನಾಲ್ಕನೇ ಸ್ಥಾನ ಪಡೆದರು. ವಿಲಿಯಮ್ಸ್ ತಂಡದ ವಾಲ್ಟೆರಿ ಬೊಟ್ಟಾಸ್ ಅಗ್ರ ಐದರಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಇದೇ ಮೊದಲ ಬಾರಿಗೆ ಐದನೇ ಸ್ಥಾನ ಪಡೆದ ಫೋರ್ಸ್ ಇಂಡಿಯಾ
ಇತ್ತ ಈ ರೇಸ್‍ನಲ್ಲಿ ಫೋರ್ಸ್ ಇಂಡಿಯಾ ಐದನೇ ಸ್ಥಾನ ಪಡೆಯಿತು. ಚಾಲಕ ನಿಕೊ ಹಲ್ಕನ್‍ಬರ್ಗ್ ಆಕರ್ಷಕ ಪ್ರದರ್ಶನ ನೀಡಿ 6ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರೆ, ಆ ಮೂಲಕ 8 ಅಂಕಗಳನ್ನು ಪೇರಿಸಿದರು. ಪ್ರಸಕ್ತ ಸಾಲಿನಲ್ಲಿ ಒಟ್ಟು 120 ಅಂಕಗಳನ್ನು ಗಳಿಸಿರುವ ಫೋರ್ಸ್ ಇಂಡಿಯಾ, ಲೋಟಸ್ ತಂಡಕ್ಕಿಂತ 44 ಅಂಕಗಳ ಮುನ್ನಡೆಯಲ್ಲಿದೆ. ಆ ಮೂಲಕ ಪ್ರಸಕ್ತ ಋತುವಿನಲ್ಲಿ ಅಂತಿಮ ರೇಸ್ ಆಗಿರುವ ಅಬುದಾಬಿ ಜಿಪಿಯ ಮುನ್ನವೇ ಐದನೇ ಸ್ಥಾನ ಖಚಿತಪಡಿಸಿದೆ. ಭಾರತ ಇದೇ ಮೊದಲ ಬಾರಿಗೆ ತಂಡಗಳ ಚಾಂಪಿ ಯನ್‍ಶಿಪ್‍ನಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ.
Advertisement