ಹೈದರಾಬಾದ್: ಇದೇ ತಿಂಗಳು 26ರಂದು ನಡೆಯಲಿರುವ, ಮಿಶ್ರ ಡಬಲ್ಸ್ ಪ್ರದರ್ಶನ ಪಂದ್ಯಾವಳಿಯ 2ನೇ ಪಂದ್ಯಕ್ಕೆ ಸಾನಿಯಾ ಮಿರ್ಜಾ ಟೆನಿಸ್ ತರಬೇತಿ ಸಂಸ್ಥೆ (ಎಸ್ ಎಂಟಿಎ) ಆತಿಥ್ಯ ವಹಿಸಲಿದ್ದು, ಈ ಪಂದ್ಯವು ಹೈದರಾಬಾದ್‍ನಲ್ಲಿ ನಡೆಯಲಿದೆ. ಈ ಬಗ್ಗೆ, ಎಸ್‍ಎಂಟಿಎ ಪ್ರಕಟಣೆ ಹೊರಡಿಸಿದೆ. ತಲಾ ಎರಡು ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿರುವ ಸಾನಿಯಾ ಮಿರ್ಜಾ ಮಹೇಶ್ ಭೂಪತಿ (2009ರ ಆಸ್ಟ್ರೇಲಿಯಾ ಓಪನ್ ಹಾಗೂ 2012ರ ಫ್ರೆಂಚ್ ಓಪನ್), ಮಾರ್ಟಿನಾ ಹಿಂಗಿಸ್ ಲಿಯಾಂಡರ್ ಪೇಸ್ (2003ರ ಆಸ್ಟ್ರೇಲಿಯನ್ ಓಪನ್ ಹಾಗೂ ವಿಂಬಲ್ಡನ್)ಜೋಡಿಯು ಪರಸ್ಪರ ಮುಖಾಮುಖಿಯಾಗಲಿದೆ. ಈ ಸರಣಿಯ ಮೊದಲ ಹಾಗೂ ಮೂರನೇ ಪಂದ್ಯಗಳು ನ. 25 ಹಾಗೂ 27ರಂದು ಕೋಲ್ಕತಾದಲ್ಲಿ ನಡೆಯಲಿದೆ. ಈ ಋತುವಿನಲ್ಲಿ ಸ್ವಿಸ್ ಆಟಗಾರ್ತಿ ಮಾರ್ಟಿನಾ ಹಿಂಗಿಸ್ ಜತೆಗೆ ಭರ್ಜರಿ ಪ್ರದರ್ಶನ ನೀಡಿದ ಸಾನಿಯಾ, ಪ್ರತಿಷ್ಠಿತ ಎರಡು ಗ್ರಾಂಡ್‍ಸ್ಲಾಂ ಪ್ರಶಸ್ತಿಗಳಲ್ಲದೆ, ಡಬ್ಲ್ಯೂಟಿಎ ಪ್ರಶಸ್ತಿಯನ್ನೂ ಜಯಿಸಿದ್ದರು. ಸದ್ಯ ರಜೆಯ ಮೋಜಿನಲ್ಲಿರುವ ಸಾನಿಯಾ, ವರ್ಷಾಂತ್ಯದಲ್ಲಿ ನಡೆಯಲಿರುವ ಐಟಿಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದ್ದು, ಅದಕ್ಕೂ ಮುಂಚಿನ ಈ ಪ್ರದರ್ಶನ ಪಂದ್ಯದ ಆತಿಥ್ಯಕ್ಕೆ ಸಜ್ಜಾಗಿದ್ದಾರೆ.