ಇಂದಿನಿಂದ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್, ಒಲಿಂಪಿಕ್ಸ್ ನತ್ತ ಭಾರತೀಯರ ಗಮನ

ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಇತ್ತೀಚೆಗೆ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮನೋಜ್ಞ ಪ್ರದರ್ಶನ ನೀಡಿ ವಿಶ್ವಮಟ್ಟದ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಯಾವುದೇ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಇತ್ತೀಚೆಗೆ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಮನೋಜ್ಞ ಪ್ರದರ್ಶನ ನೀಡಿ ವಿಶ್ವಮಟ್ಟದ ಹಣಾಹಣಿಗೆ ಅರ್ಹತೆ ಪಡೆದುಕೊಂಡ ಭಾರತದ ಆರು ಬಾಕ್ಸರ್‍ಗಳು ಅ. 6ರಿಂದ 18ರವರೆಗೆ ನಡೆಯಲಿರುವ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಉತ್ಕೃಷ್ಟ ಪ್ರದರ್ಶನ ನೀಡುವ ಕಾತರದಲ್ಲಿದ್ದಾರೆ.

ಆದರೆ, ಈ ಬಾರಿ ಅವರ ಗುರಿ ಕೇವಲ ಪದಕ ಗೆಲ್ಲುವುದಲ್ಲ. ಮುಂದಿನ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೊದಲ್ಲಿ ನಡೆಯಲಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಅರ್ಹತೆಯನ್ನು ಪಡೆಯುವ ಹೆಬ್ಬಯಕೆಯೂ ಇದೆ. ಇದೇ ನಿರೀಕ್ಷೆಯಲ್ಲಿಗ ಎಲ್. ದೇವೇಂದ್ರೊ ಸಿಂಗ್ (49 ಕೆಜಿ), ಮದನ್ ಲಾಲ್ (52 ಕೆಜಿ), ಶಿವ ಥಾಪಾ (56ಕೆಜಿ), ಮನೋಜ್ ಕುಮಾರ್ (64 ಕೆಜಿ), ವಿಕಾಸ್ ಕೃಷ್ಣನ್ (75 ಕೆಜಿ) ಹಾಗೂ ಸತೀಶ್ ಕುಮಾರ್ (+91 ಕೆಜಿ) ಅವರು ಇದೀಗ, ತಮ್ಮ ಕನಸನ್ನು ನನಸು ಮಾಡಿಕೊಳ್ಳುವ ಇರಾದೆಯಲ್ಲಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ, ಭಾರತೀಯ ಬಾಕ್ಸಿಂಗ್ ಸಂಸ್ಥೆ (ಬಿಐ), ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ)ಯಿಂದ ಅಮಾನತುಗೊಂಡಿರುವುದರಿಂದ ಎಲ್ಲಾ ಭಾರತೀಯ ಬಾಕ್ಸರ್‍ಗಳೂ ಎಐಬಿಎ ಲಾಂಛನದಡಿಯಲ್ಲಿ ಈ ಟೂರ್ನಿಗೆ ಕಾಲಿಟ್ಟಿದ್ದಾರೆ. ಆದರಿಲ್ಲಿ, ಅವರ ಒಲಿಂಪಿಕ್ಸ್ ಕನಸು ನನಸಾಗುವುದು ಅಷ್ಟು ಸುಲಭದ ಮಾತಲ್ಲ. ಈ ಟೂರ್ನಿಯಲ್ಲಿ ಒಟ್ಟು 73 ದೇಶಗಳಿಂದ 260 ಬಾಕ್ಸರ್‍ಗಳು ಪಾಲ್ಗೊಳ್ಳುತ್ತಿದ್ದಾರೆ. ಇವರಲ್ಲಿ ಕೇವಲ 23 ಮಂದಿಗಷ್ಟೇ ಒಲಿಂಪಿಕ್ಸ್‍ನಲ್ಲಿ ಪಾಲ್ಗೊಳ್ಳುವ ಅವಕಾಶವಿದೆ. ಅಂದರೆ, ಕೇವಲ ಪದಕ ವಿಜೇತರಷ್ಟೇ ಒಲಿಂಪಿಕ್ಸ್‍ಗೆ ಕಾಲಿಡಲಿದ್ದಾರೆ.

ಅದರಲ್ಲೂ 91 ಹಾಗೂ +91ಕೆಜಿ ವಿಭಾಗಗಳಲ್ಲಿ ಚಿನ್ನ ಗೆದ್ದವರು ಮಾತ್ರ ರಿಯೋ ಡಿ ಜನೈರೊ ಕಡೆ ಮುಖ ಮಾಡಲಿದ್ದಾರೆ. ಹಾಗಾಗಿ, ಭಾರತೀಯರ ಮುಂದಿರುವ ಈ ಕನಸು ಕೊಂಚ ದುಬಾರಿಯೇ ಸರಿ. ಆದರೂ, ಈಗಾಗಲೇ ಹಲವಾರು ಪಂದ್ಯಾವಳಿಗಳಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿರುವ ವಿಕಾಸ್, ಶಿವ, ದೇವೇಂದ್ರೊ ಹಾಗೂ ಮನೋಜ್ ಮೇಲೆ ಹೆಚ್ಚು ಭರವಸೆಯಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com