

ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಅವರ ವಿರುದ್ಧ ಸುಳ್ಳು ಸಾಕ್ಷ್ಯ ಮೊಕದ್ದಮೆಯನ್ನು ಸಲ್ಲಿಸಿದ್ದ ಎನ್. ಶ್ರೀನಿವಾಸನ್, ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಅವರ ಮನವಿಯಂತೆ ಸೋಮವಾರ ಅರ್ಜಿಯನ್ನು ವಾಪಸ್ ಪಡೆದಿದ್ದಾರೆ.
ಭಾನುವಾರ ಬಿಸಿಸಿಐ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶಶಾಂಕ್ ಮನೋಹರ್ ತಮಿಳುನಾಡು ಕ್ರಿಕೆಟ್ ಸಂಸ್ಥೆ ಪ್ರತಿನಿಧಿ ರಾಮನ್ ಅವರ ಮೂಲಕ ಅನುರಾಗ್ ಠಾಕೂರ್ ವಿರುದ್ಧದ ಅರ್ಜಿಯನ್ನು ಹಿಂಪಡೆ ಯುವಂತೆ ಶ್ರೀನಿವಾಸನ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು. ಬಿಸಿಸಿಐನ ಆಂತರಿಕ ವಿಷಯಗಳನ್ನು ಮಾತಪಕತೆಗಳ ಮೂಲಕ ಚರ್ಚಿಸಿಕೊಳ್ಳಬೇಕೆ ಹೊರತು ಕೋರ್ಟ್ ಆವರಣದಲ್ಲಿ ಅಲ್ಲ ಎಂದು ತಿಳಿಸಿದ್ದರು. ಅದರನ್ವಯ ಶ್ರೀನಿವಾಸನ್ ಸೋಮವಾರವೇ ತಮ್ಮ ಅರ್ಜಿಯನ್ನು ಹಿಂಪಡೆದರು.
ಹಿತಾಸಕ್ತಿ ಸಂಘರ್ಷ ನಿಭಾಯಿಸಲು ಸೂಚನೆ: ಕ್ರಿಕೆಟ್ ಆಡಳಿತಕ್ಕೆ ಸಂಬಂಧಿಸಿದಂತೆ ಶ್ರೀನಿವಾಸನ್ ಅವರ ಹಿತಾಸಕ್ತಿ ಸಂಘರ್ಷದ ವಿಷಯವನ್ನು ನಿಭಾಯಿಸುವಂತೆ ಸುಪ್ರೀಂ ಕೋರ್ಟ್ ಬಿಸಿಸಿಐಗೆ ಸೂಚನೆ ನೀಡಿದೆ. ಸೋಮವಾರ ಬಿಸಿಸಿಐನಲ್ಲಿ ಶ್ರೀನಿವಾಸನ್ ಅವರ ಸ್ಥಾನಮಾನ ಕುರಿತಂತೆ ಸ್ಪಷ್ಟನೆ ಕುರಿತ ನಡೆದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಶ್ರೀನಿವಾಸನ್ ಅವರ ಕ್ರಿಕೆಟ್‍ಗೆ ಸಂಬಂಧಿಸಿದ ಹಿತಾಸಕ್ತಿ ಸಂಘರ್ಷ ಇನ್ನೂ ಮುಂದುವರೆದಿದೆಯೇ ಎಂಬುದನ್ನು ಬಿಸಿಸಿಐ ನಿರ್ಧರಿಸಬೇಕು. ಈ ಪ್ರಕರಣವನ್ನು ನಿರಂತರವಾಗಿ ನ್ಯಾಯಾಲಯ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿತು. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ತಂಡದ ಷೇರುಗಳನ್ನು ವರ್ಗಾಯಿಸಿದ್ದರೂ, ಶ್ರೀನಿವಾಸನ್ ಅವರ ಹಿತಾಸಕ್ತಿ ಸಂಘರ್ಷ ಮುಂದುವರೆದಿದೆ. ಹಾಗಾಗಿ ಶ್ರೀನಿವಾಸನ್ ಅವರು ಬಿಸಿಸಿಐ ಸಭೆಗಳಲ್ಲಿ ಬಾಗವಹಿಸುವಂತಿಲ್ಲ
ಎಂದು ಬಿಸಿಸಿಐ ಪರ ವಕೀಲರು ವಾದಿಸಿದ್ದಾರೆ.
ನಿಮ್ಮ ನಿರ್ಧಾರಕ್ಕೆ ಬದ್ಧರಾಗಿ: ``ಶ್ರೀನಿವಾಸನ್ ಅವರ ಕುರಿತಂತೆ ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ಬದಟಛಿರಾಗಿ. ನಿಮ್ಮ ನಿರ್ಧಾರಕ್ಕಾಗಿ ಪದೇ ಪದೇ ನಮ್ಮ ಒಪ್ಪಿಗೆ ಪಡೆಯಲು ನ್ಯಾಯಾಲಯದ ಮೆಟ್ಟಿಲೇರುವುದು ಸರಿಯಲ್ಲ. ಜನವರಿಯಲ್ಲಿ ನಾವು ಹೇಳಿರುವ ತೀರ್ಪು ಸ್ಪಷ್ಟವಾಗಿದೆ. ಶ್ರೀನಿವಾಸನ್ ಅವರನ್ನು ಅನರ್ಹಗೊಳಿಸುವುದಾದರೆ, ಆ ನಿರ್ಧಾರವನ್ನು ಮುಂದುವರೆಸಿ, ನಿಮ್ಮ ನಿರ್ಧಾರ ಶ್ರೀನಿವಾಸನ್ ಅವರಿಗೆ ಸಮಸ್ಯೆಯಾದರೇ ನ್ಯಾಯಾಲಯದ ಮೊರೆ ಹೋಗುತ್ತಾರೆ. ಈ ವಿಷಯದಲ್ಲಿ ಇಬ್ಬರಿಗೂ ಹೋರಾಟ ಮಾಡಲು ಸ್ವತಂತ್ರವಿದೆ'' ಎಂದು ಸುಪ್ರೀಂ ಕಟುವಾಗಿ ತಿಳಿಸಿದೆ.
ಜನವರಿಯಲ್ಲಿ ನೀಡಲಾದ 2013ರ ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಸಿಎಸ್ ಕೆ ಮಾಲೀಕತ್ವ ಹೊಂದಿರುವ ಶ್ರೀನಿನಾಸನ್ ಸ್ವ ಹಿತಾಸಕ್ತಿ ಸಂಘರ್ಷ ಅಂತ್ಯಗೊಳ್ಳುವವರೆಗೂ ಅವರು ಬಿಸಿಸಿಐ ಯಾವುದೇ ಸಭೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ತೀರ್ಪು ನೀಡಿತ್ತು.
Advertisement