
ಕೋಲ್ಕತಾ: ಮಿಡ್ ಫೀಲ್ಡರ್‍ಗಳಾದ ಜಾವಿ ಲಾರಾ ಹಾಗೂ ಅರಾರಾ ಇಜುಮಿ ದಾಖಲಿಸಿದ ತಲಾ ಒಂದೊಂದು ಗೋಲುಗಳ ನೆರವಿನಿಂದಾಗಿ ಅಟ್ಲೆಕಿಕೊ ಡಿ ಕೋಲ್ಕತಾ ಪ್ರಸಕ್ತ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ (ಐಎಸ್‍ಎಲ್) ಟೂರ್ನಿಯ 10ನೇ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಪರಾಭವಗೊಳಿಸಿತು. ಇಲ್ಲಿನ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ನಡೆದ 6ನೇ ನಿಮಿಷದ ಪಂದ್ಯದಲ್ಲಿ ಆಟಗಾರ ಲಾರಾ ದಾಖಲಿಸಿದ ಗೋಲಿನಿಂದ 1-0 ಅಂತರದ ಮುನ್ನಡೆ ಸಾಧಿಸಿದ ಕೋಲ್ಕತಾ, ಪಂದ್ಯದ ಕೊನೆಯವರೆಗೂ ಬಾರಿ ಅಂತರವನ್ನು ಕಾಯ್ದುಕೊಂಡಿತು.
ಆನಂತರ, ದ್ವಿತೀಯಾರ್ಧದಲ್ಲಿ ಜಪಾನ್ ಸಂಜಾತ ಭಾರತೀಯ ಆಟಗಾರ ಅರಾರಾ ಇಜುಮಿ, ಪಂದ್ಯದ 53ನೇ ನಿಮಿಷದಲ್ಲಿ ಕೋಲ್ಕತಾಕ್ಕೆ 2ನೇ ಗೋಲು ತಂದಿತ್ತರು. ಈ ಮೂಲಕ, ಕೇರಳದ ವಿರುದ್ಧ ಇನ್ನಷ್ಟು ಪ್ರಾಬಲ್ಯ ಮೆರೆದ ಕೋಲ್ಕತಾ ಗೆಲುವಿನ ಗುರಿಯತ್ತ ದಾಪುಗಾಲಿಟ್ಟಿತು.
ಆವರೆಗೆ ಗೋಲು ಗಳಿಸುವಲ್ಲಿ ತನಗೆ ಸಿಕ್ಕಿದ್ದ ಹಲವಾರು ಅವಕಾಶಗಳನ್ನು ಕೈ ಚೆಲ್ಲಿದ್ದ ಕೇರಳ ತಂಡಕ್ಕೆ ಪಂದ್ಯದ ಕೊನೆಯ ಹಂತದಲ್ಲಿ ಯಶಸ್ಸು ದಕ್ಕಿತು. 80ನೇ ನಿಮಿಷದಲ್ಲಿ ಇಂಗ್ಲೆಂಡ್ ನ ಸ್ಟ್ರೈಕರ್ ಕ್ರಿಸ್ ಡಾಗ್ನಲ್ ಗಳಿಸಿದ ಗೋಲು ಕೇರಳ ತಂಡದ ಗೋಲಿನ ಖಾತೆ ತೆರೆಯುವಂತೆ ಮಾಡಿತು. ಆದರೂ, ತನ್ನ ದುರ್ಬಲ ಆಟದಿಂದಾಗಿ ಕೋಲ್ಕೋತಾ ವಿರುದ್ಧ ಅದು ಶರಣಾಗಲೇಬೇಕಾಯಿತು.
Advertisement