ಕೊನೆಯ ಎರಡು ಏಕದಿನ ಪಂದ್ಯದಲ್ಲಿ ಉಮೇಶ್ ಬದಲು ರಾಜ್ಯದ ಅರವಿಂದ್ ಗೆ ಸ್ಥಾನ
ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಿಗೆ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಕರ್ನಾಟಕದ ವೇಗಿ ಶ್ರೀನಾಥ್ ಅರವಿಂದ್ ಅವರು ಸ್ಥಾನ ಪಡೆದಿದ್ದಾರೆ.
ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಇಲ್ಲಿ ನಡೆದ ಆಯ್ಕೆ ಸಮಿತಿಯ ಸಭೆಯ ಬಳಿಕ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಈ ವಿಷಯವನ್ನು ಪ್ರಕಟಿಸಿದರು.ಇದೇ ವೇಳೆ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೂ ತಂಡವನ್ನು ಪ್ರಕಟಿಸಲಾಗಿದೆ. ಆದರೆ, ಟೆಸ್ಟ್ ತಂಡದಲ್ಲಿ ಯಾವುದೇ ಪ್ರಮುಖ ಬದಲಾವಣೆ ಮಾಡಿಲ್ಲ. ಆಲ್ ರೌಂಡರ್, 26 ವರ್ಷದ ರವೀಂದ್ರ ಜಡೇಜ ಅವರಿಗೆ 14 ತಿಂಗಳ ಬಳಿಕ ಮತ್ತೆ ಅವಕಾಶ ನೀಡಲಾಗಿದೆ.
ಅರವಿಂದ್‌ಗೆ ಸ್ಥಾನ: ಏಕದಿನ ತಂಡದಲ್ಲಿ ಉಮೇಶ್ ಯಾದವ್ ಅವರ ಬದಲಿಗೆ ಕರ್ನಾಟಕದ ವೇಗಿ ಎಸ್.ಅರವಿಂದ್ ಅವರಿಗೆ ಅವಕಾಶ ದೊರೆತಿದೆ.ಕೊನೆಯ ಎರಡು ಏಕದಿನ ಪಂದ್ಯಗಳು ಕ್ರಮವಾಗಿ ಚೆನ್ನೈ ಹಾಗೂ ಮುಂಬೈನಲ್ಲಿ ನಡೆಯಲಿವೆ. ಇನ್ನು, ನವೆಂಬರ್ 5ರಿಂದ ಆರಂಭಗೊಳ್ಳಿರುವ ಟೆಸ್ಟ್ ಸರಣಿಯ ಪಂದ್ಯಗಳು ಕ್ರಮವಾಗಿ ಮೊಹಾಲಿ, ಬೆಂಗಳೂರು, ನಾಗಪುರ ಹಾಗೂ ದೆಹಲಿಯಲ್ಲಿ ನಡೆಯಲಿವೆ. ಇನ್ನುಳಿದಂತೆ ಭಾರತ ತಂಡದಲ್ಲಿ ಹೆಚ್ಚೇನೂ ಬದಲಾವಣೆಯಿಲ್ಲ.
ಕರ್ನಾಟಕದಿಂದ ಆಲ್‍ರೌಂಡರ್ ಸ್ಟುವರ್ಟ್ ಬಿನ್ನಿ ಇತ್ತೀಚಿನ ಕಳಪೆ ಪ್ರದರ್ಶನದ ಮಧ್ಯೆಯೂ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ. ಇನ್ನು ನಾಲ್ಕು ಟೆಸ್ಟ್ ಪಂದ್ಯ ಸರಣಿಗೂ ಮುಂಚಿನ ಒಂದು ಅಭ್ಯಾಸ ಪಂದ್ಯಕ್ಕೂ ತಂಡವನ್ನು ಪ್ರಕಟಿಸಿರುವ ಸಂದೀಪ್ ಪಾಟೀಲ್ ಸಾರಥ್ಯದ ಆಯ್ಕೆ ಸಮಿತಿ, ರಾಜ್ಯದ ಕರುಣ್ ನಾಯರ್‍ಗೆ ಸ್ಥಾನ ಕಲ್ಪಿಸಿದೆ ಅಂದಹಾಗೆ ಐದು ಪಂದ್ಯ ಸರಣಿಯಲ್ಲಿ ಈಗಾಗಲೇ ದ.ಆಫ್ರಿಕಾ 2-1 ಮುನ್ನಡೆ ಸಾಧಿಸಿದ್ದು, ಕೊನೆಯ ಎರಡು ಏಕದಿನ ಪಂದ್ಯಗಳು ಕ್ರಮವಾಗಿ ಚೆನ್ನೈ ಹಾಗೂ ಮುಂಬೈನಲ್ಲಿ ಜರುಗಲಿವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ