
ಮೆಕ್ಸಿಕೊ ಸಿಟಿ: ಭಾರತೀಯ ಬಿಲ್ಲುಗಾರಿಕೆಯಲ್ಲಿ ಪ್ರಮುಖ ಹೆಸರಾಗಿರುವ ದೀಪಿಕಾ ಕುಮಾರಿ ಆರ್ಚರಿ (ಬಿಲ್ಲುಗಾರಿಕೆ) ವಿಶ್ವಕಪ್ ಫೈನಲ್‍ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಕ್ವಾರ್ಟರ್ ಫೈನಲ್ ಹಾಗೂ ಸೆಮಿ ಫೈನಲ್‍ನಲ್ಲಿ ಸುಲಭ ಗೆಲುವು ಪಡೆದ ದೀಪಿಕಾ, ಫೈನಲ್‍ನಲ್ಲಿ ಮಾತ್ರ ಮುಗ್ಗರಿಸಿದರು.ಅಂತಿಮ ಸುತ್ತಿನ ಗುರಿ ಇಡುವ ಸ್ಪರ್ಧೆಯಲ್ಲಿ ದೀಪಿಕಾ, ಕೊರಿಯಾದ ಚೊಯಿ ಮಿಸುನ್ ಎದುರು 2-6 ರಿಂದ ಸೋಲನುಭವಿಸಿದರು.ಅಂದಹಾಗೆ ಇದುವರೆಗಿನ ನಾಲ್ಕು ವಿಶ್ವ ಕಪ್ ಫೈನಲ್‍ನಲ್ಲಿ ಸ್ಪರ್ಧಿಸಿರುವ ದೀಪಿಕಾ, ನಾಲ್ಕರಲ್ಲಿಯೂ ರಜತ ಪದಕಕ್ಕಷ್ಟೇ ತೃಪ್ತರಾಗಿದ್ದು, ಚಿನ್ನದ ಪದಕ ಮಾತ್ರ ಆಕೆಯ ಪಾಲಿಗೆ ಮರೀಚಿಕೆಯಾಗಿದೆ.
``ಎಲ್ಲೋ ಏನೋ ಎಡವಟ್ಟು ಆಗುತ್ತಿದ್ದು, ಇದರಿಂದಾಗಿಯೇ ಚಿನ್ನದ ಪದಕದಿಂದ ನಾನು ವಂಚಿತವಾಗುತ್ತಿದ್ದೇನೆ'' ಎಂದು ಸ್ಪರ್ಧೆಯ ಬಳಿಕ ದೀಪಿಕಾ ಪ್ರತಿಕ್ರಿಯಿಸಿದರು.
2010ರ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮೊದಲ ಬಾರಿಗೆ ಚಿನ್ನ ಗೆದ್ದಿದ್ದ ದೀಪಿಕಾ, ಎರಡು ವರ್ಷಗಳ ಬಳಿಕ ಅಂತಾಲ್ಯದಲ್ಲಿ ನಡೆದಿದ್ದ ಆರ್ಚರಿ ವಿಶ್ವಕಪ್‍ನಲ್ಲಿಯೂ ಸ್ವರ್ಣ ಜಯಿಸಿದ್ದರು. ಇನ್ನು 2011ರ ಇಸ್ತಾನ್‍ಬುಲ್, 2012ರ ಟೋಕಿಯೋ ಹಾಗೂ 2013ರ ಪ್ಯಾರಿಸ್ ವಿಶ್ವ ಆರ್ಚರಿ ಫೈನಲ್ ಚಾಂಪಿಯನ್‍ಶಿಪ್ ಗಳಲ್ಲಿ ಭಾಗವಹಿಸಿರುವ ದೀಪಿಕಾ, ಈ ಮೂರರಲ್ಲಿಯೂ ರನ್ನರ್‍ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದ್ದರು. ಅಂದಹಾಗೆ ಭಾನುವಾರವಷ್ಟೇ ಪುರುಷರ ವಿಭಾಗದಲ್ಲಿ ಅಭಿಷೇಕ್ ವರ್ಮ ಕಾಂಪೌಂಡ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಹೀಗಾಗಿ ಎರಡು ಬೆಳ್ಳಿ ಪದಕಗಳೊಂದಿಗೆ ಭಾರತ ತನ್ನ ಹೋರಾಟವ ನ್ನು ಮುಕ್ತಾಯಗೊಳಿಸಿದಂತಾಗಿದೆ.
Advertisement