ಸಿಂಗಾಪುರ: ಪ್ರಸಕ್ತ ಸಾಲಿನಲ್ಲಿ ತಮ್ಮ ಅತ್ಯುತ್ತಮ ಲಯವನ್ನು ಮುಂದುವರಿಸಿರುವ ವಿಶ್ವದ ನಂಬರ್ ಒನ್ ಮಹಿಳಾ ಟೆನಿಸ್ ಜೋಡಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿಯು ಈ ವರ್ಷದ 10ನೇ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.
ವರ್ಷದ ಅಂತಿಮ ಪ್ರತಿಷ್ಠಿತ ಟೆನಿಸ್ ಟೂರ್ನಿಯಾಗಿರುವ ಡಬ್ಲ್ಯೂಟಿಎ ಫೈನಲ್ಸ್ ಪಂದ್ಯಾವಳಿಯಲ್ಲಿ ಶನಿವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಹಾಗೂ ಹಿಂಗಿಸ್ ಜೋಡಿಯು ತಮ್ಮ ಪ್ರತಿಸ್ಪರ್ಧಿ ಚೈನೀಸ್ ಥೈಪೇನ ಹೌ ಚಿಂಗ್ ಚಾನ್ ಮತ್ತು ಯಂಗ್ ಜಾನ್ ಚಾನ್ ವಿರುದ್ಧ 6-4, 6-2 ಸೆಟ್ ಗಳ ಅಂತರದಲ್ಲಿ ಮಣಿಸಿತು.
ಆ ಮೂಲಕ ಭಾರತ ಹಾಗೂ ಸ್ವಿಜರ್ಲೆಂಡ್ ಜೋಡಿಯು ಸತತ 21ನೇ ಪಂದ್ಯದಲ್ಲಿ ಗೆದ್ದು ತಮ್ಮ ಜೈತ್ರ ಯಾತ್ರೆ ಮುಂದುವರಿಸಿದೆ.
ಅಲ್ಲದೆ, ಈ ವರ್ಷ 10ನೇ ಟೂರ್ನಿಯಲ್ಲಿ ಅಂತಿಮ ಸುತ್ತಿನವರೆಗೂ ಪ್ರವೇಶಿಸಿದ ಸಾಧನೆ ಮಾಡಿದೆ. ಈಗಾಗಲೇ ಅಂತಿಮ ಸುತ್ತಿಗೆ ಪ್ರವೇಶಿಸಿದ್ದ 9 ಟೂರ್ನಿಗಳ ಪೈಕಿ 8ರಲ್ಲಿ ಪ್ರಶಸ್ತಿ ಗೆದ್ದಿರುವ ಈ ಜೋಡಿ, ಈ ಪ್ರಶಸ್ತಿಯನ್ನು ಗೆದ್ದು ವರ್ಣರಂಜಿತವಾಗಿ ಪ್ರಸಕ್ತ ಋತುವಿಗೆ ತೆರೆ ಎಳೆಯಲು ಎದುರು ನೋಡುತ್ತಿದೆ.
ಶರಪೋವಾಗೆ ಆಘಾತ
ವಿಶ್ವದ 3ನೇ ಶೇಯಾಂಕಿತ ಆಟಗಾರ್ತಿ, ರಷ್ಯಾದ ಆಟಗಾರ್ತಿ ಮಾರಿಯಾ ಶರಪೋವಾ, ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಜೆಕ್ ಗಣರಾಜ್ಯದ ಪೇಟ್ರಾ ಕ್ವಿಟೊವಾ ವಿರುದ್ಧದ ಪಂದ್ಯದಲ್ಲಿ 3-6, 6-7(3-7) ಸೆಟ್ ಗಳ ಅಂತರದಲ್ಲಿ ಪರಾಭವ ಹೊಂದಿದರು.