ಫೆಡರರ್, ಮರ್ರೆ ಮುನ್ನಡೆ

ವರ್ಷದ ಕಡೆಯ ಗ್ರಾಂಡ್‍ಸ್ಲಾಮ್ ಪಂದ್ಯಾವಳಿಯಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರ್ ಹಾಗೂ ಬ್ರಿಟನ್‍ನ ಆ್ಯಂಡಿ ಮರ್ರೆ ಮೂರನೇ ಸುತ್ತಿಗೆ ಧಾವಿಸಿದ್ದರೆ,...
ರೋಜರ್ ಫೆಡರರ್
ರೋಜರ್ ಫೆಡರರ್
ನ್ಯೂಯಾರ್ಕ್: ವರ್ಷದ ಕಡೆಯ ಗ್ರಾಂಡ್‍ಸ್ಲಾಮ್ ಪಂದ್ಯಾವಳಿಯಲ್ಲಿ ಸ್ವಿಸ್ ಆಟಗಾರ ರೋಜರ್ ಫೆಡರ್ ಹಾಗೂ ಬ್ರಿಟನ್‍ನ ಆ್ಯಂಡಿ ಮರ್ರೆ ಮೂರನೇ ಸುತ್ತಿಗೆ ಧಾವಿಸಿದ್ದರೆ, ಮಹಿಳೆಯರ ವಿಭಾಗದಲ್ಲಿ ಡೆನ್ಮಾರ್ಕ್‍ನ ಆಟಗಾರ್ತಿ ಕೆರೋಲಿನ್ ವೋಜ್ನಿಯಾಕಿ ನಿರ್ಗಮಿಸಿದ್ದಾರೆ. 
ಅಂದಹಾಗೆ ಗುರುವಾರದ ಯುಎಸ್ ಓಪನ್‍ನ ಪಂದ್ಯಾಟವು ಒಂದು ವಿಧದಲ್ಲಿ ನಾಟಕೀಯತೆಯಿಂದ ಕೂಡಿದ್ದಾಗಿತ್ತು. ಮಹಿಳಾ ವಿಭಾಗದಲ್ಲೇ ಸುದೀರ್ಘಾವ„ಯದ್ದೆನಿಸಿಕೊಂಡ ವೋಜ್ನಿಯಾಕಿ ಹಾಗೂ ಪೆಟ್ರಾ ಸೆಟ್ಕೋವ್‍ಸ್ಕಾ ನಡುವಣದ ಪಂದ್ಯ ಒಂದೆಡೆಯಾದರೆ, ಬ್ರಿಟನ್ ಆಟಗಾರ ಆ್ಯಂಡಿ ಮರ್ರೆ ತಮ್ಮ 10 ವರ್ಷಗಳ ವೃತ್ತಿಬದುಕಿನಲ್ಲೇ ಅತಿ ಶೀಘ್ರಗತಿಯಲ್ಲಿ ಗ್ರಾಂಡ್‍ಸ್ಲಾಮ್ ಟೂರ್ನಿಯಿಂದ ಹೊರಬೀಳುವ ಅಪಾಯದಿಂದ ಬಚಾವಾದದ್ದು ಮತ್ತೊಂದು. 
ಇನ್ನು ಲೂಯಿಸ್ ಆಮರ್ಸ್ಟ್ರಾಂಗ್ ಕ್ರೀಡಾಂಗಣಕ್ಕೆ ಅಪ್ಪಳಿಸಿದ ಡ್ರೋನ್ ತಂದ ಆತಂಕ ಕೂಡ ಅದರಲ್ಲಿ ಒಂದು. 2009 ಹಾಗೂ 2014ರ ಸಾಲಿನ ರನ್ನರ್‍ಅಪ್ ಕೆರೋಲಿನ್ ವೋಜ್ನಿಯಾಕಿ ಈ ಋತುವಿನ ಕೊನೆಯ ಗ್ರಾಂಡ್‍ಸ್ಲಾಮ್ ಟೂರ್ನಿಯಲ್ಲಿ ಎರಡನೇ ಸುತ್ತಿಗೇ ತನ್ನ ಹೋರಾಟ ಕೊನೆಗಾಣಿಸಿದರು. ಜೆಕ್ ಆಟಗಾರ್ತಿ ಪೆಟ್ರಾ ಸೆಟ್ಕೋಸ್ಕಾ ಎದುರಿನ ಸುದೀರ್ಘ ಕಾದಾಟದಲ್ಲಿ ಆಕೆ 6-4, 5-7, 7-6 (7/1) ಸೆಟ್‍ಗಳಿಂದ ಹಿನ್ನಡೆ ಅನುಭವಿಸಿ ಟೂರ್ನಿಯಿಂದ ಹೊರಬಿದ್ದರು. ಸೊಂಟದ ನೋವಿನಿಂದಾಗಿ ಕಳೆದ ಏಳು ತಿಂಗಳಿನಿಂದ ಕೋರ್ಟ್‍ನಿಂದ ಆಚೆ ಉಳಿದಿದ್ದ ಪೆಟ್ರಾ, ಪಂದ್ಯದಲ್ಲಿ 60 ಅನಗತ್ಯ ಹೊಡೆತಗಳಿಂದ ತಪ್ಪೆಸಗಿದರೂ, ಇಷ್ಟೇ ಸಂಖ್ಯೆಯ ವಿನ್ನರ್‍ಗಳಿಂದ ಜಯಶಾಲಿಯಾಗಿ 3ನೇ ಸುತ್ತಿಗೆ ಮುನ್ನಡೆದರು. ಕೊನೆಯ ಟೈಬ್ರೇಕರ್ ಸೆಟ್‍ನಲ್ಲಿ ಮಿಂಚು ಹರಿಸಿದ ಪೆಟ್ರಾ, ವೋಜ್ನಿಯಾಕಿಗೆ ಆಘಾತ ನೀಡಿದರು.
ಒತ್ತಡ ಮೆಟ್ಟಿನಿಂತ ಮರ್ರೆ 
ಇನ್ನು ಪುರುಷರ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಆ್ಯಂಡಿ ಆಟಗಾರ ಅಡ್ರಿಯನ್ ಮನ್ನಾರಿನೊ ಒಡ್ಡಿದ ಕಠಿಣ ಪ್ರತಿರೋಧದಿಂದ ಎದುರಿಸಿದ ಒತ್ತಡವನ್ನು ಕೊನೆಗೂ ಮೆಟ್ಟಿನಿಂತು ಮೂರನೇ ಸುತ್ತಿಗೆ ಧಾವಿಸಿದರು. ಅತ್ಯಂತ ಆಕ್ರಮಣಕಾರಿ ಹೋರಾಟ ನಡೆಸಿದ ಅಡ್ರಿಯನ್ ಎದುರು ಭಾರೀ ಕಸರತ್ತು ನಡೆಸಿದ ಮರ್ರೆ ಅಂತಿಮವಾಗಿ 5-7, 4-6, 6-1, 6-3, 6-1 ಸೆಟ್‍ಗಳ ಗೆಲುವಿನ ನಗೆಬೀರಿದರು. 
ಸಾನಿಯಾ ಶುಭಾರಂಭ, 2ನೇ ಸುತ್ತಿನಲ್ಲಿ ಪೇಸ್‍ಗೆ ಮುಖಭಂಗ 
ಇನ್ನು ಭಾರತದ ಸಾನಿಯಾ ಮಿರ್ಜಾ ಹಾಗೂ ಲಿಯಾಂಡರ್ ಪೇಸ್ ತಂತಮ್ಮ ಜತೆಯಾಟಗಾರರ ಜತೆಗೆ ಎರಡನೇ ಸುತ್ತಿಗೆ ಧಾವಿಸಿದರು. ಪುರುಷರ ಡಬಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಪೇಸ್ ಹಾಗೂ ಅವರ ಜತೆಯಾಟಗಾರ ಸ್ಪೇನ್‍ನ ಫೆರ್ನಾಂಡೊ ಜರ್ಮನಿಯ ಫ್ಲೋರಿಯನ್ ಮಯೆರ್ ಹಾಗೂ ಫ್ರಾಂಕ್ ಮೊಡೆರ್ ವಿರುದ್ಧ 6-2, 6-3ರ ಎರಡು ನೇರ ಸೆಟ್‍ಗಳಲ್ಲಿ ಗೆಲುವು ಪಡೆದು ಶುಭಾರಂಭ ಮಾಡಿದ್ದರು. ಆದರೆ ಶುಕ್ರವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಪೇಸ್ ಜೋಡಿಯು ತಮ್ಮ ಎದುರಾಳಿ ಸ್ಟೀವ್ ಜಾನ್ಸನ್, ಸ್ಯಾಮ್ ಖುರ್ರೆ ವಿರುದ್ಧ 5-7, 6-4, 3-6 ಸೆಟ್‍ಗಳಿಂದ ಪರಾಭವಗೊಂಡಿತು. ಮಹಿಳೆಯರ ಡಬಲ್ಸ್‍ನ ಮೊದಲ ಸುತ್ತಿನಲ್ಲಿ ಸಾನಿಯಾ ಮಿರ್ಜಾ ಹಾಗೂ ಮಾರ್ಟಿನಾ ಹಿಂಗಿಸ್ ಜೋಡಿ ಅಮೆರಿಕನ್ ಜೋಡಿ ಕೈಟ್ಲಿನ್ ಕ್ರಿಸಿಯನ್ ಮತ್ತು ಸಬ್ರಿನಾ ಸಂಟಾಮರಿಯಾ ವಿರುದ್ಧ 6-1, 6-2 ಸೆಟ್‍ಗಳಿಂದ ಗೆಲುವು ಸಾಧಿಸಿತು. 
ಡ್ರೋನ್ ತರಿಸಿದ ಆತಂಕ 
ಯುಎಸ್ ಓಪನ್ ಟೆನಿಸ್ ಟೂರ್ನಿಯ ವೇಳೆ ಅಪ್ಪಳಿಸಿ ಆತಂಕ ಸೃಷ್ಟಿಸಿದ ಹಿನ್ನೆಲೆಯಲ್ಲಿ ಫ್ಲಶಿಂಗ್ ಮೆಡೋಸ್ ಸಂಕೀರ್ಣದಲ್ಲಿ ಡ್ರೋನ್‍ವೊಂದನ್ನು ನಾಶಪಡಿಸಲಾಯಿತು. ಲೂಯಿಸ್ ಆಮರ್ಸ್ಟ್ರಾಂಗ್ ಕ್ರೀಡಾಂಗಣದಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಇಟಲಿಯ ಫ್ಲಾವಿಯಾ ಪೆನೆಟ್ಟಾ ಮತ್ತು ರೊಮೇನಿಯಾದ ಮೊನಿಕಾ ನಿಕುಲೆಸ್ಕು ನಡುವಣದ ಪಂದ್ಯದ ವೇಳೆ ಈ ಡ್ರೋನ್ ಅಡಚಣೆ ಉಂಟು ಮಾಡಿತು. ಗುರುವಾರ ರಾತ್ರಿ 8.27ರ ಸುಮಾರಿಗೆ ನೈರುತ್ಯ ಭಾಗದಿಂದ ಈ ಡ್ರೋನ್ ಕ್ರೀಡಾಂಗಣದತ್ತ ಹಾರಿ ಬಂದಿತು. ಡ್ರೋನ್ ಅನ್ನು ನಾಶಪಡಿಸಿದ ಸ್ಥಳದಲ್ಲಿ ಯಾವುದೇ ಪ್ರೇಕ್ಷಕರು ಇಲ್ಲದ ಪರಿಣಾಮ ಯಾರಿಗೂ ತೊಂದರೆಯಾಗಲಿಲ್ಲ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com