ಕರ್ನಾಟಕ ಪ್ರಿಮಿಯರ್ ಲೀಗ್: ಬುಲ್ಸ್ , ಟೈಗರ್ಸ್ ಜಯಭೇರಿ

ಸ್ಪಿನ್ನರ್‍ಗಳಾದ ಕೆ.ಸಿ ಕಾರ್ಯಪ್ಪ ಹಾಗೂ ಕೆ.ಪಿ ಅಪ್ಪಣ್ಣ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಬಿಜಾಪುರ ಬುಲ್ಸ್ ತಂಡ ನಾಲ್ಕನೇ ಆವೃತ್ತಿಯ ಕರ್ನಾಟಕ...
ಬಿಜಾಪುರ ಬುಲ್ಸ್
ಬಿಜಾಪುರ ಬುಲ್ಸ್
ಹುಬ್ಬಳ್ಳಿ: ಸ್ಪಿನ್ನರ್‍ಗಳಾದ ಕೆ.ಸಿ ಕಾರ್ಯಪ್ಪ ಹಾಗೂ ಕೆ.ಪಿ ಅಪ್ಪಣ್ಣ ಅವರ ಪರಿಣಾಮಕಾರಿ ದಾಳಿಯ ನೆರವಿನಿಂದ ಬಿಜಾಪುರ ಬುಲ್ಸ್ ತಂಡ ನಾಲ್ಕನೇ ಆವೃತ್ತಿಯ ಕರ್ನಾಟಕ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. 
ಶುಕ್ರವಾರ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡವು ಬಳ್ಳಾರಿ ಟಸ್ಕರ್ಸ್ ವಿರುದ್ಧ 16 ರನ್‍ಗಳ ಗೆಲುವು ದಾಖಲಿಸಿತು. ಟಾಸ್ ಗೆದ್ದ ಬಳ್ಳಾರಿ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. 
ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್ 20 ಓವರ್ ಗಳಲ್ಲಿ 8 ವಿಕೆಟ್‍ಗೆ 125 ರನ್ ದಾಖಲಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಬಳ್ಳಾರಿ ಟಸ್ಕರ್ಸ್ 19.5 ಓವರ್‍ಗಳಲ್ಲಿ 109 ರನ್‍ಗಳಿಗೆ ಆಲೌಟ್ ಆಗುವ ಮೂಲಕ ತೀವ್ರ ಮುಖಭಂಗ ಅನುಭವಿಸಿತು. 
ಕಾಡಿದ ಕಾರ್ಯಪ್ಪ: ಬಿಜಾಪುರ ಬುಲ್ಸ್ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟಸ್ಕರ್ಸ್ ಪಡೆಗೆ ಸ್ಪಿನ್ನರ್ ಕೆ.ಸಿ ಕಾರ್ಯಪ್ಪ ಮಾರಕವಾಗಿ ಪರಿಣಮಿಸಿದರು. ಬುಲ್ಸ್ ತಂಡದ ಸಂಘಟಿತ ಬೌಲಿಂಗ್ ದಾಳಿಗೆ ತತ್ತರಿಸಿದ ಬಳ್ಳಾರಿ ಬಳಗ ನಿಗದಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸೋಲಿನತ್ತ ಹೆಜ್ಜೆ ಹಾಕಿತು. ಪಂದ್ಯದಲ್ಲಿ 4 ಓವರ್ ಮಾಡಿ ಕೇವಲ 14 ರನ್‍ಗಳಿಗೆ 3 ವಿಕೆಟ್ ಪಡೆದ ಕಾರ್ಯಪ್ಪ ಬುಲ್ಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಆರಂಭಿಕರಾದ ಡಿ. ನಿಶ್ಚಲ್ (6) ಹಾಗೂ ಭರತ್ ಚಿಪ್ಲಿ (0) ಹಾಗೂ ಪವನ್ ದೇಶಪಾಂಡೆ (1) ಬೇಗನೆ ವಿಕೆಟ್ ಒಪ್ಪಿಸಿದರು. ಪರಿಣಾಮ ಬಳ್ಳಾರಿ 28 ರನ್‍ಗಳಿಗೆ 3 ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಈ ವೇಳೆ ಅಮಿತ್ ವರ್ಮಾ (26), ಅನಿರುದ್ಧ ಜೋಷಿ (30) ಹೋರಾಟ ನೀಡುವ ಪ್ರಯತ್ನ ನಡೆಸಿದರಾದರೂ ಸಫಲವಾಗಲಿಲ್ಲ. ಎದುರಾಳಿಗಳ ಮೇಲಿನ ಒತ್ತಡವನ್ನು ಮುಂದುವರಿಸಿದ ಬುಲ್ಸ್ ಆಟಗಾರರು ನಿಯಮಿತವಾಗಿ ವಿಕೆಟ್ ಪಡೆದು ಸಾಧಾರಣ ಮೊತ್ತವನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಕಾರ್ಯಪ್ಪಗೆ ಉತ್ತಮ ಸಾಥ್ ನೀಡಿದ ಕೆ.ಪಿ. ಅಪ್ಪಣ್ಣ 3, ವೈಶಾಕ್ 2, ಸುನಿಲ್ ರಾಜು 1 ವಿಕೆಟ್ ಪಡೆದರು.
ಅಖಿಲ್ ಆಸರೆ: ಇದಕ್ಕೂ ಮುನ್ನ ಮೊದಲು ಬ್ಯಾಟಿಂಗ್ ಮಾಡಿದ ಬಿಜಾಪುರ ಬುಲ್ಸ್, ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ. ಆರ್. ಸಮರ್ಥ್ (17), ರಾಜು ಭಟ್ಕಳ್ (21), ರಾಬಿನ್ ಉತ್ತಪ್ಪ (9), ದೀಪಕ್ (5), ಸುನೀಲ್ ರಾಜು (6) ಹಾಗೂ ಎಂ.ನಿಧೇಶ್ (0) ಬೇಗನೇ ವಿಕೆಟ್ ಒಪ್ಪಿಸಿದರು. ಹಾಗಾಗಿ ತಂಡ ಒತ್ತಡಕ್ಕೆ ಸಿಲುಕಿತು.ಈ ವೇಳೆ ಕಣಕ್ಕಿಳಿದ ನಾಯಕ ಬಾಲಚಂದ್ರ ಅಖಿಲ್ (25) ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿ ತಂಡವನ್ನು 120ರ ಗಡಿ ದಾಟುವಂತೆ ನೋಡಿಕೊಂಡರು. ಬಳ್ಳಾರಿ ತಂಡದ ಪರ ಪ್ರಸಿದ್ 3, ಪ್ರಸನ್ನ 2, ಕಾರ್ತಿಕ್ ಮತ್ತು ಅಮಿತ್ ತಲಾ 1 ವಿಕೆಟ್ ಪಡೆದರು. ಸಂಕ್ಷಿಪ್ತ ಸ್ಕೋರ್‍ಬಿಜಾಪುರ ಬುಲ್ಸ್ 20 ಓವರ್‍ಗಳಲ್ಲಿ 8 ವಿಕೆಟ್ ಗೆ 125 (ಅಖಿಲ್ 25, ರಾಜು ಭಟ್ಕಳ್ 21, ಪ್ರಸಿದ್ 24ಕ್ಕೆ3, ಪ್ರಸನ್ನ 25ಕ್ಕೆ 2) ಬಳ್ಳಾರಿ ಟಸ್ಕರ್ಸ್ 19.5 ಓವರ್‍ಗಳಲ್ಲಿ 109 (ಅಮಿತ್ ವರ್ಮಾ 26, ಅನಿರುದ್ಧ 30, ಕಾರ್ಯಪ್ಪ 14ಕ್ಕೆ3, ಅಪ್ಪಣ್ಣ 17ಕ್ಕೆ 3) ಪಂದ್ಯಶ್ರೇಷ್ಠ: ಕೆ.ಸಿ ಕಾರ್ಯಪ್ಪ
ಟೈಗರ್ಸ್‍ಗೆ ರಾಕ್ ಸ್ಟಾರ್ಸ್ ಸುಲಭ ತುತ್ತು 
ಇತ್ತ ಶುಕ್ರವಾರ ನಡೆದ ಎರಡನೇ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ ರಾಕ್ ಸ್ಟಾರ್ಸ್ ವಿರುದ್ಧ 32 ರನ್‍ಗಳ ಅಂತರದಲ್ಲಿ ಜಯಿಸಿತು. ಟಾಸ್ ಗೆದ್ದ ರಾಕ್ ಸ್ಟಾರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ 20 ಓವರ್‍ಗಳಲ್ಲಿ 5 ವಿಕೆಟ್‍ಗೆ 154 ರನ್ ಸಂಪಾದಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ರಾಕ್‍ಸ್ಟಾರ್ಸ್ ತಂಡ 20 ಓವರ್‍ಗಳಲ್ಲಿ 6 ವಿಕೆಟ್‍ಗೆ 122 ರನ್ ಗಳಿಸಲಷ್ಟೇ ಶಕ್ತವಾಯಿತು. ಹುಬ್ಬಳ್ಳಿ ಪರ ಕೆ.ಬಿ ಪವನ್ (55) ಹಾಗೂ ಕುನಾಲ್ ಕಪೂರ್ (52) ಆಕರ್ಷಕ ಬ್ಯಾಟಿಂಗ್ ನಡೆಸಿದರು. ರಾಕ್‍ಸ್ಟಾರ್ಸ್ ಪರ ರಾಜೀವ್ ಎಚ್ (39) ಗರಿಷ್ಠ ರನ್ ದಾಖಲಿಸಿದ ಆಟಗಾರನಾದರು. ಸಂಕ್ಷಿಪ್ತ ಸ್ಕೋರ್ ಹುಬ್ಬಳ್ಳಿ ಟೈಗರ್ಸ್ 20 ಓವರ್‍ಗಳಲ್ಲಿ 5 ವಿಕೆಟ್‍ಗೆ 154 (ಕೆ.ಬಿ ಪವನ್ 55, ಕುನಾಲ್ ಕಪೂರ್ 52, ಸುನೀಲ್ ಜೋಷಿ 16ಕ್ಕೆ1, ಡೇವಿಡ್ ಜಾನ್ಸನ್ 34ಕ್ಕೆ1) ರಾಕ್‍ಸ್ಟಾರ್ಸ್ 20 ಓವರ್‍ಗಳಲ್ಲಿ 6 ವಿಕೆಟ್‍ಗೆ 122 (ರಾಜೀವ್ 39, ಮದನ್ ಮೋಹನ್ 31, ದಿಕ್ಷಾಂಶು ನೇಗಿ 9ಕ್ಕೆ4, ನವೀನ್ 15ಕ್ಕೆ1)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com