ಕರುಣ್ ನಾಯರ್
ಕರುಣ್ ನಾಯರ್

ಮಿತ್ರಕಾಂತ್ ದಾಳಿಗೆ ಮೈಸೂರು ವಾರಿಯರ್ಸ್ ತತ್ತರ

ಕರುಣ್ ನಾಯರ್ (67 ರನ್, 1 ವಿಕೆಟ್) ಅವರ ಆಲ್ರೌಂಡ್ ಪ್ರದರ್ಶನ ಹಾಗೂ ಮಿತ್ರಕಾಂತ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಮಂಗಳೂರು ಯುನೈಟೆಡ್ ತಂಡ ...

ಕರುಣ್ ನಾಯರ್ (67 ರನ್, 1 ವಿಕೆಟ್) ಅವರ ಆಲ್ರೌಂಡ್ ಪ್ರದರ್ಶನ ಹಾಗೂ ಮಿತ್ರಕಾಂತ್ ಅವರ ಮಾರಕ ಬೌಲಿಂಗ್ ದಾಳಿಯ ನೆರವಿನಿಂದ ಮಂಗಳೂರು ಯುನೈಟೆಡ್ ತಂಡ ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ನಾಲ್ಕನೇ ಆವೃತ್ತಿಯಲ್ಲಿ ಜಯ ದಾಖಲಿಸಿದರೆ, ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಸತತ ಎರಡನೇ ಸೋಲುಂಡಿದೆ. ಶನಿವಾರ ರಾಜನಗರದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಮಂಗಳೂರು ಯುನೈಟೆಡ್ ತಂಡ 39 ರನ್‍ಗಳ ಅಂತರದಲ್ಲಿ ಮನೀಶ್ ಪಾಂಡೆ ಪಡೆಯನ್ನು ಮಣಿಸಿದೆ.

ಟಾಸ್ ಗೆದ್ದ ಮೈಸೂರು ವಾರಿಯರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ತಂಡ 20 ಓವರ್‍ಗಳಲ್ಲಿ 4 ವಿಕೆಟ್‍ಗೆ 191 ರನ್ ದಾಖಲಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡ 17.4 ಓವರ್‍ಗಳಲ್ಲಿ 152 ರನ್‍ಗಳಿಗೆ ಆಲೌಟ್ ಆಯಿತು.

ಅರ್ಜುನ್ ಹೋರಾಟ ವ್ಯರ್ಥ: ಮಂಗಳೂರು ಯುನೈಟೆಡ್ ನೀಡಿದ ಕಠಿಣ ಮೊತ್ತವನ್ನು ಬೆನ್ನಟ್ಟಿದ ಮೈಸೂರು ವಾರಿಯರ್ಸ್ ತಂಡದ ಪರ ಆರಂಭಿಕ ಅರ್ಜುನ್ ಹೋಯ್ಸಳ (87 ರನ್, 51 ಎಸೆತ, 9 ಬೌಂಡರಿ, 2 ಸಿಕ್ಸರ್) ಅವರ ಹೋರಾಟಕಾರಿ ಪ್ರದರ್ಶನ ತಂಡದ ಗೆಲುವಿಗೆ ನೆರವಾಗಲಿಲ್ಲ. ನಾಯಕ ಮನೀಷ್ ಪಾಂಡೆ (1) ಆರಂಭದಲ್ಲೇ ವಿಕೆಟ್ ಒಪ್ಪಿಸಿದರು. ನಂತರ ಎರಡನೇ ವಿಕೆಟ್‍ಗೆ ಮೈಸೂರು ತಂಡ 99 ರನ್ ಪೇರಿಸಿತು. ಈ ವೇಳೆಗೆ ವಾರಿಯರ್ಸ್ 9.5 ಓವರ್‍ಗೆ 106 ರನ್ ದಾಖಲಿಸಿ ಗೆಲುವಿನತ್ತ ದಾಪುಗಾಲಿಟ್ಟಿದ್ದರು. ಆದರೆ, ನಂತರ ಬಂದ ಬ್ಯಾಟ್ಸ್‍ಮನ್‍ಗಳು ರನ್‍ರೇಟ್ ಒತ್ತಡ ನಿಭಾಯಿಸುವಲ್ಲಿ ವಿಫಲರಾದರು. ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಮೈಸೂರು ತಂಡ ಸೋಲಿನತ್ತ ಮುಖ ಮಾಡಿತು. ನಂತರ ಬಂದ ನವೀನ್ (9), ಅಕ್ಷಯ್ (5), ಸುಚಿತ್ (1), ಸಿ.ಎಂ ಗೌತಮ್ (3), ಕೆ. ಗೌತಮ್ (1), ಡೇವಿಡ್ ಮಥಿಯಾಸ್ (9) ಹೆಚ್ಚಿನ ಕಾಣಿಕೆ ನೀಡಲಿಲ್ಲ. ಪರಿಣಾಮ, ತಂಡ 152 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.

ಪಂದ್ಯದ ಮಹತ್ವದ ಹಂತದಲ್ಲಿ ತಂಡದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಮಿತ್ರಕಾಂತ್ 4 ವಿಕೆಟ್ ಕಬಳಿಸಿ, ಎದುರಾಳಿಗಳಿಗೆ ಮಾರಕವಾದರು. ಉಳಿದಂತೆ ಭರತ್ ಹಾಗೂ ರೋನಿತ್ ತಲಾ 2, ಕರುಣ್ 1 ವಿಕೆಟ್ ಪಡೆದರು. ಕರುಣ್ ಅರ್ಧಶತಕ: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮಂಗಳೂರು ಯುನೈಟೆಡ್ ತಂಡ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ನೀಡಿತು. ಆರಂಭಿಕ ರೊಹನ್ ಕದಮ್ (25), ಕರುಣ್ ನಾಯರ್ (67)
ತಂಡಕ್ಕೆ ಉತ್ತಮ ಆರಂಭ ನೀಡಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಶಿಶಿರ್ ಭವಾನೆ (40), ಭರತ್ ಎನ್.ಪಿ (ಅಜೇಯ 46) ತಂಡಕ್ಕೆ ಅಮೂಲ್ಯ ಕಾಣಿಕೆ ನೀಡಿ ದರು. ಪರಿಣಾಮ ತಂಡ ಬೃಹತ್ ಮೊತ್ತ ಪೇರಿಸಿತು. ಮಂಗಳೂರು ತಂಡದ ಪರ ಜಿ.ನವೀನ್ 2, ಸುಚಿತ್ ಮತ್ತು ಶಾಂತರಾಜು ತಲಾ 1 ವಿಕೆಟ್ ಪಡೆದರು.

Related Stories

No stories found.

Advertisement

X
Kannada Prabha
www.kannadaprabha.com