
ನವದೆಹಲಿ: ಭರವಸೆ ಸ್ಟ್ರೈಕರ್ ಆಕಾಶ್ ದೀಪ್ ಸಿಂಗ್ ನಾಲ್ಕನೇ ಆವೃತ್ತಿಯ ಹಾಕಿ ಇಂಡಿಯಾ ಲೀಗ್ ಟೂರ್ನಿ ಆಟಗಾರರ ಹರಾಜಿನಲ್ಲಿ ದುಬಾರಿ ಭಾರತಿಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಇನ್ನು ಜರ್ಮನಿಯ ಮೊರಿಟ್ಜ್ ಫರ್ಟ್ಸೆ ದಾಖಲೆಯ ಮೊತ್ತಕ್ಕೆ ಮಾರಾಟವಾದರು. ಸೆ.18 ರಂದು ಹರಾಜು ಪ್ರಕ್ರಿಯೆಯಲ್ಲಿ ಉತ್ತರ ಪ್ರದೇಶ ಮಿಜಾರ್ಡ್ಸ್ ತಂಡವು ಆಕಾಶ್ ದೀಪ್ ಸಿಂಗ್ ಗೆ ರೂ 55 ಲಕ್ಷಕ್ಕೆ ಖರೀದಿಸಿತು. ವಿದೇಶಿ ಆಟಗಾರರ ಪೈಕಿ ಜರ್ಮನಿಯ ಮೊರಿಟ್ಜ್ ಅವರನ್ನು ಕಳಿಂಗಾ ಲ್ಯಾನ್ಸರ್ಸ್ ತಂದ ರೂ.69 ಲಕ್ಷ ಮೊತ್ತಕ್ಕೆ ಖರೀದಿಸಿತು. ಒಟ್ಟು 272 ಆಟಗಾರರ ಹೆಸರು ಹರಾಜು ಪ್ರಕ್ರಿಯೆಯಲ್ಲಿತ್ತಾದರೂ ಅಂತಿಮವಾಗಿ 89 ಆಟಗಾರರು ಹರಾಜಿನಲ್ಲಿ 6 ತಂಡಗಳ ಪಾಲಾದರು. ಆ ಮೂಲಕ ಉಳಿಕೆ ಆಟಗಾರರು ಸೇರಿದಂತೆ ಪ್ರತಿ ಫ್ರಾಂಚೈಸಿ 20 ಆಟಗಾರರೊಂದಿಗೆ ತಮ್ಮ ತಂಡವನ್ನು ಪೂರ್ಣಗೊಳಿಸಿದೆ.
ಈ ಹರಾಜು ಪ್ರಕ್ರಿಯೆಯಲ್ಲಿ 56 ಭಾರತೀಯ ಆಟಗಾರರು 33 ವಿದೇಶಿ ಆಟಗಾರರು ವಿವಿಧ ತಂಡಗಳಿಗೆ ಮಾರಾಟವಾಗಿದ್ದಾರೆ. ಉತ್ತರ ಪ್ರದೇಶ ಮಿಜಾರ್ಡ್ಸ್ ತಂಡದ ಪರ ಸಲಹಗಾರನಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ವಿ.ಆರ್ ರಘುನಾಥ್, ತಮ್ಮ ತಂಡಕ್ಕೆ ಆಕಾಶ್ ದೀಪ್ ಸಿಂಗ್ ರನ್ನು ಪಡೆಯಲು ಸಾಕಷ್ಟು ಪೈಪೋಟಿ ನಡೆಸಿದರು. ದಬಾಂಗ್ ಮುಂಬೈ ಮತ್ತು ರಾಂಚಿ ರೇಸ್ ತಂಡಗಳಿಂದ ತೀವ್ರ ಪೈಪೋಟಿ ಎದುರಿಸಿದರೂ ರಘುನಾಥ್, ಸ್ಟ್ರೈಕರ್ ಆಟಗಾರನನ್ನು ಇತರೆ ತಂಡಗಳಿಗೆ ಬಿಟ್ಟುಕೊಡಲಿಲ್ಲ.
ಹರಾಜಿನಲ್ಲಿ ಮಾರಾಟವಾಗದ ಆಟಗಾರರನ್ನು ರಿಸರ್ವ್ ವಿಭಾಗದಲ್ಲಿ ಇರಿಸಲಾಗಿದ್ದು, ಟೂರ್ನಿಯ ವೇಳೆ ಯಾವುದೇ ಆಟಗಾರ ಗಾಯಗೊಂಡರೆ, ಆತನ ಬದಲಿಗೆ ಈ ಆಟಗಾರರನ್ನು ಉಪಯೋಗಿಸಿಕೊಳ್ಳುವ ಅವಕಾಶವಿದೆ. ಜರ್ಮನಿಯ ಆಟಗಾರರಾದ ತೌಬಿಯಾಸ್ ಹೌಕೆ ಮತ್ತು ಫ್ಲೋರಿನ್ ಫಚಾಸ್ ತಲಾ ರೂ.63 ಲಕ್ಷಕ್ಕೆ ಕ್ರಮವಾಗಿ ಉತ್ತರ ಪ್ರದೇಶ ಮಿಜಾರ್ಡ್ಸ್ ಮತ್ತು ದಬಾಂಗ್ ಮುಂಬೈ ತಂಡಕ್ಕೆ ಬಿಕರಿಯಾದರು.
Advertisement