ಕೆಪಿಎಲ್ 2015: ಫೈನಲ್ ಗೆ ಹುಬ್ಬಳ್ಳಿ ಟೈಗರ್ಸ್

ಆರಂಭಿಕ ಮೊಹಮದ್ ತಾಹ (93 ರನ್, 56 ಎಸೆತ, 9 ಬೌಂಡರಿ, 5 ಸಿಕ್ಸರ್) ಅವರ ಬಿಡುಬೀಸಿನ ಬ್ಯಾಟಿಂಗ್ ಮತ್ತು ಎಸ್.ಎಲ್. ಅಕ್ಷಯ್(4 ವಿಕೆಟ್) ಮಾರಕ ದಾಳಿಯ...
ಹುಬ್ಬಳ್ಳಿ ಟೈಗರ್ಸ್
ಹುಬ್ಬಳ್ಳಿ ಟೈಗರ್ಸ್
ಮೈಸೂರು: ಆರಂಭಿಕ ಮೊಹಮದ್ ತಾಹ (93 ರನ್, 56 ಎಸೆತ, 9 ಬೌಂಡರಿ, 5 ಸಿಕ್ಸರ್) ಅವರ ಬಿಡುಬೀಸಿನ ಬ್ಯಾಟಿಂಗ್ ಮತ್ತು ಎಸ್.ಎಲ್. ಅಕ್ಷಯ್(4 ವಿಕೆಟ್) ಮಾರಕ ದಾಳಿಯ ನೆರವಿನಿಂದ ಹುಬ್ಬಳ್ಳಿ ಟೈಗರ್ಸ್ ತಂಡ ಪ್ರಸಕ್ತ ಸಾಲಿನ ಕರ್ನಾಟಕ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್‍ಗೆ ಲಗ್ಗೆ ಹಾಕಿದೆ. 
ಶನಿವಾರ ಗಂಗೋತ್ರಿ ಗ್ಲೇಡ್ಸ್ ಮೈದಾನದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡ 23 ರನ್‍ಗಳ ಅಂತರದಲ್ಲಿ ಬೆಳಗಾವಿ ಪ್ಯಾಂಥರ್ಸ್ ತಂಡವನ್ನು ಮಣಿಸಿತು. ಈ ಮೂಲಕ ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಬಿಜಾಪುರ ಬುಲ್ಸ್ ತಂಡವನ್ನು ಎದುರಿಸಲು ಅರ್ಹತೆ ಪಡೆದುಕೊಂಡಿದೆ. 
ಟಾಸ್ ಗೆದ್ದ ಪ್ಯಾಂಥರ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಹುಬ್ಬಳ್ಳಿ ಟೈಗರ್ಸ್ ತಂಡ 20 ಓವರ್‍ಗಳಲ್ಲಿ 7 ವಿಕೆಟ್ ಗೆ 177 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 154 ರನ್ ಕಲೆಹಾಕಿತು. 
ಭರತ್ ಹೋರಾಟ ವ್ಯರ್ಥ: ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಬೆಳಗಾವಿ ಪ್ಯಾಂಥರ್ಸ್ ತಂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಪ್ಯಾಂಥರ್ಸ್ ಒತ್ತಡಕ್ಕೆ ಸಿಲುಕಿತು. ಮಧ್ಯಮ ಕ್ರಮಾಂಕದಲ್ಲಿ ಕೆ.ಎನ್. ಭರತ್ (48), ಪ್ರವೀಣ್ (24) ಹಾಗೂ ಸ್ಟಾಲಿನ್ ಹೂವರ್ (31) ಚುರುಕಿನ ಬ್ಯಾಟಿಂಗ್‍ನಿಂದ ಹೋರಾಟ ನೀಡಿದರಾದರೂ ಯಶಸ್ವಿಯಾಗಲಿಲ್ಲ. 
ಮನ ಸೆಳೆದ ಮೊಹಮದ್: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಹುಬ್ಬಳ್ಳಿ ಟೈಗರ್ಸ್ ತಂಡಕ್ಕೆ ಆರಂಭಿಕ ಬ್ಯಾಟ್ಸ್ ಮನ್ ಮೊಹಮದ್ ತಾಹ ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ಎಲ್ಲರ ಮನ ಗೆದ್ದರು. ತಾಹ ಜತೆಗೆ ಇನಿಂಗ್ಸ್ ಆರಂಭಿಸಿದ ಕೆ.ಬಿ. ಪವನ್ (9) ತಂಡಕ್ಕೆ 54 ರನ್‍ಗಳ ಉತ್ತಮ ಆರಂಭ ನೀಡಿದರು. ಪವನ್ ವಿಕೆಟ್ ಬಿದ್ದ ನಂತರ ಕುನಾಲ್ ಕಪೂರ್ (3), ನೇಗಿ (11) ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲಲಿಲ್ಲ. ಹುಬ್ಬಳ್ಳಿ ತಂಡದ ಇನಿಂಗ್ಸ್ ಅನ್ನು ಉತ್ತಮ ಹಾದಿಯಲ್ಲಿ ಮುನ್ನಡೆಸಿದರು. 4ನೇ ವಿಕೆಟ್‍ಗೆ ನಿತಿನ್ ಬಿಲ್ಲೆ (27) ಜತೆಗೂಡಿದ ಮೊಹಮದ್ 64 ರನ್ ಜತೆಯಾಟದ ಮೂಲಕ ತಂಡವನ್ನು ಸುಸ್ಥಿತಿಗೆ ತಂದು ನಿಲ್ಲಿಸಿದರು. ಈ ವೇಳೆ ಮೊಹಮದ್, ಶತಕದಿಂದ ವಂಚಿತರಾದರು. ನಂತರ ಬಂದ ಚೇತನ್ ವಿಲಿಯಮ್ ಕೇವಲ 10 ಎಸೆತಗಳಲ್ಲಿ 21 ರನ್ ದಾಖಲಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಂತೆ ನೋಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com