ಡೇವಿಸ್ ಕಪ್: ಭಾರತಕ್ಕೆ ನಿರಾಸೆ

ನಿರ್ಣಾಯಕವಾಗಿದ್ದ ರಿವರ್ಸ್ ಸಿಂಗಲ್ಸ್ ನ ಮೊದಲ ಪಂದ್ಯದಲ್ಲೇ ಯುವ ಆಟಗಾರ ಯೂಕಿ ಭಾಂಬ್ರಿ ಸೋಲನುಭವಿಸುವುದರೊಂದಿಗೆ ಪ್ರತಿಷ್ಠಿತ ಡೇವಿಸ್ ಕಪ್ ...
ಯೂಕಿ ಭಾಂಬ್ರಿ
ಯೂಕಿ ಭಾಂಬ್ರಿ

ನವದೆಹಲಿ: ನಿರ್ಣಾಯಕವಾಗಿದ್ದ ರಿವರ್ಸ್ ಸಿಂಗಲ್ಸ್ ನ ಮೊದಲ ಪಂದ್ಯದಲ್ಲೇ  
ಯುವ ಆಟಗಾರ ಯೂಕಿ ಭಾಂಬ್ರಿ ಸೋಲನುಭವಿಸುವುದರೊಂದಿಗೆ ಪ್ರತಿಷ್ಠಿತ ಡೇವಿಸ್ ಕಪ್ ಟೆನಿಸ್ ಪಂದ್ಯಾವಳಿಯ ವಿಶ್ವ ಗುಂಪಿಗೆ ಪ್ರವೇಶಿಸಲು ತುಡಿಯುತ್ತಿದ್ದ ಭಾರತದ ಕನಸು ಭಗ್ನ ಗೊಂಡಿತಲ್ಲದೇ ಮುಂದಿನ ವರ್ಷವೂ  ಭಾರತ ಏಷ್ಯಾ, ಒಷೇನಿಯಾ ಗುಂಪಿನಲ್ಲೇ  ಉಳಿಯುವಂತಾಯಿತು.

ಇಲ್ಲಿನ  ಆರ್.ಕೆ ಖನ್ನಾ ಕ್ರೀಡಾಂಗಣದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಡೇವಿಸ್  ಕಪ್ ಪಂದ್ಯಾವಳಿಯಲ್ಲಿ  ಜೆಕ್ ಗಣರಾಜ್ಯ 3-1ರ ಮುನ್ನಡೆಯೊಂದಿಗೆ ಪ್ರಾಬಲ್ಯ ಮೆರೆದು  ಭಾರತದ ಕನಸನ್ನು  ನುಚ್ಚುನೂರುಗೊಳಿಸಿತು. ಶನಿವಾರ ನಡೆದ ಡಬಲ್ಸ್ ವಿಭಾಗದಲ್ಲಿ ಹಿರಿಯ ಆಟಗಾರ ಲಿಯಾಂಡರ್ ಪೇಸ್ ಹಾಗೂ ರೋಹನ್ ಬೋಪಣ್ಣ ಜೋಡಿ ಸೋಲನುಭವಿಸಿದಾಗಲೇ, ಭಾರತ ತೀವ್ರ ಒತ್ತಡಕ್ಕೆ ಸಿಲುಕಿತ್ತು.  ಆದಾಗ್ಯೂ ಯೂಕಿ ಬಾಂಬ್ರಿ ಮತ್ತು ಸೋಮ್ ದೇವ್ ದೇವ್ ವರ್ಮನ್  ಸಿಂಗಲ್ಸ್ ನಲ್ಲಿ  ತಿರುಗೇಟು ನೀಡುವರೆಂಬ ವಿಶ್ವಾಸ  ಇರಿಸಿಕೊಳ್ಳಲಾಗಿತ್ತಾದರೂ, ಅದು ಕೇವಲ ಭ್ರಮೆ ಎನಿಸಿತು.

ಭಾನುವಾರ ನಡೆದ ಮೊದಲ ಸಿಂಗಲ್ಸ್ ನಲ್ಲಿ ವಿಶ್ವದ 40 ನೇ ಶ್ರೇಯಾಂಕಿತ ಆಟಗಾರ ವೆಸ್ಲೆ ಎದುರು ಭಾಂಬ್ರಿ6, 5-7, 2-6ರ ಮೂರು ನೇರ ಸೆಟ್‍ಗಳಲ್ಲಿ ಪರಾಭವಗೊಂಡದ್ದರಿಂದ ಟೂರ್ನಿಯ ಐದನೇ ಪಂದ್ಯದಲ್ಲಿ ಭಾಗವಹಿಸದೆಯೇ  ಮೂರು ಭಾರಿಯೂ ಡೇವಿಸ್ ಕಪ್ ಚಾಂಪಿಯನ್ ಜೆಕ್ ಗಣರಾಜ್ಯ ಭರ್ಜರಿ  ಗೆಲುವಿನೊಂದಿಗೆ ಮತ್ತೆ ವಿಶ್ವ ಗುಂಪಿಗೆ ಅರ್ಹತೆ ಪಡೆಯಿತು. ಆದರೆ, ಕಳೆದ 2011ರ ಮಾರ್ಚ್ ನಲ್ಲಿ  ಸರ್ಬಿಯಾ ವಿರುದ್ಧ 1-4ರಿಂದ ಸೋಲನುಭವಿಸಿದ ಭಾರತ, ವಿಶ್ವ ಗುಂಪು  ಆಫ್ ಗೆ  ಅರ್ಹತೆ ಪಡೆಯಲು ಸತತ ಪ್ರಯತ್ನ ಪಡುತ್ತಲೇ ಬಂದಿದೆ.

ಎರಡನೇ ಸೆಟ್‍ನಲ್ಲಿ ಯೂಕಿ ಒಂದಷ್ಟು ಪ್ರತಿರೋಧ ತೋರಿದರೂ, ಜೆಕ್ ಆಟಗಾರ ಯೂಕಿ ಕೈ ಮೇಲಾಗದಂತೆ ನೋಡಿಕೊಂಡರು. ಮೊದಲ ಸಿಂಗಲ್ಸ್ ನಲ್ಲಿಯೂ
ಸೋಲನುಭವಿಸಿದ್ದ ಯೂಕಿ, ರಿವರ್ಸ್ ಸಿಂಗಲ್ಸ್ ನಲ್ಲಿಯೂ ಸೋಲನುಭವಿಸಿದ್ದು ಭಾರತದ ಪಾಲಿಗೆ ದುಬಾರಿ ಎನಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com