ವಿಶ್ವಕಪ್ ಟಿ೨೦ಯಲ್ಲಿ ವೆಸ್ಟ್ ಇಂಡೀಸ್ ತಂಡದ ಅಗೌರವಯುತ ವರ್ತನೆಯನ್ನು ಖಂಡಿಸಿದ ಐಸಿಸಿ

ಈ ತಿಂಗಳ ಮೊದಲ ಭಾಗದಲ್ಲಿ ವಿಶ್ವಕಪ್ ಟಿ೨೦ ಸರಣಿಯನ್ನು ಗೆದ್ದ ವೆಸ್ಟ್ ಇಂಡೀಸ್ ತಂಡದ ಅಗೌರವಯುತ ವರ್ತನೆಯನ್ನು ಖಂಡಿಸಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ)
ವಿಶ್ವ ಟಿ೨೦ ಫೈನಲ್ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಗೆದ್ದು ಸಂಭ್ರಮಿಸಿದ ಕ್ಷಣ
ವಿಶ್ವ ಟಿ೨೦ ಫೈನಲ್ ಪಂದ್ಯವನ್ನು ವೆಸ್ಟ್ ಇಂಡೀಸ್ ತಂಡ ಗೆದ್ದು ಸಂಭ್ರಮಿಸಿದ ಕ್ಷಣ

ದುಬೈ: ಈ ತಿಂಗಳ ಮೊದಲ ಭಾಗದಲ್ಲಿ ವಿಶ್ವಕಪ್ ಟಿ೨೦ ಸರಣಿಯನ್ನು ಗೆದ್ದ ವೆಸ್ಟ್ ಇಂಡೀಸ್ ತಂಡದ ಅಗೌರವಯುತ ವರ್ತನೆಯನ್ನು ಖಂಡಿಸಿರುವ ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಆಟಗಾರರ ವರ್ತನೆ ಸರಿಯಿರಲಿಲ್ಲ ಎಂದಿದೆ.

ಈ ವರ್ಷದ ಎರಡನೆ ಸಭೆಯನ್ನು ಐಸಿಸಿ ಭಾನುವಾರ ದುಬೈ ನಲ್ಲಿ ನಡೆಸಿತ್ತು. "ಫೈನಲ್ ಪಂದ್ಯದ ನಂತರ ವೆಸ್ಟ್ ಇಂಡೀಸ್ ತಂಡದ ಕೆಲವು ಆಟಗಾರರ ವರ್ತನೆ ಸರಿಯಿರಲಿಲ್ಲ ಎಂದು ಒಮ್ಮತವಾಗಿ ಐಸಿಸಿ ಒಪ್ಪಿಕೊಂಡಿದೆ ಮತ್ತು ಈ ಅಗೌರವದ ವರ್ತನೆ ಆಟಕ್ಕೆ ಕೆಟ್ಟ ಹೆಸರು ತಂದಿದೆ" ಎಂದು ಐಸಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

"ವೆಸ್ಟ್ ಇಂಡೀಸ್ ಕ್ರಿಕೆಟ್ ಸಮಿತಿ ಕ್ಷಮೆ ಕೋರಿರುವುದನ್ನು ಗಮನಿಸಿರುವ ಐ ಸಿ ಸಿ, ಅದ್ಭುತವಾದ ಸರಣಿ ಮತ್ತು ಫೈನಲ್ ಪಂದ್ಯಕ್ಕೆ ಈ ಕೆಲವು ಆಟಗಾರರ ವರ್ತನೆ ಅಗೌರವ ತಂದಿದೆ" ಎಂದು ಕೂಡ ತಿಳಿಸಿದೆ.

ವಿಶ್ವಕಪ್ ಟಿ೨೦ ಪೈನಲ್ ಪಂದ್ಯ ಗೆದ್ದ ನಂತರ ತಂಡದ ನಾಯಕ ಡ್ಯಾರೆನ್ ಸ್ಯಾಮ್ಮಿ ಅವರು ಕೆರೆಬಿಯನ್ ಕ್ರಿಕೆಟ್ ಮಂಡಲಿಯ ವಿರುದ್ಧ ಹರಿಹಾಯ್ದಿದ್ದರು. ವೇತನದಲ್ಲಿ ಕಡಿತವನ್ನು ವಿರೋಧಿಸಿ ಆಟಗಾರರ ಮತ್ತು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಲಿಯ ನಡುವಿನ ಜಟಾಪಟಿ ಸರಣಿ ಪ್ರಾರಂಭವಾಗುದಕ್ಕೆ ಮೂಂಚಿನಿಂದಲೂ ಜಾರಿಯಲ್ಲಿತ್ತು ಮತ್ತು ಕೆರಿಬಿಯನ್ ತಂಡ ಸರಣಿಯಲ್ಲಿ ಭಾಗವಹಿಸುವುದೇ ಅನಿಶ್ಚಿತವಾಗಿತ್ತು.

ಕ್ರಿಕೆಟ್ ಆಟ ವಿಶಿಷ್ಟವಾಗಿದ್ದು, ಸೋಲೇ ಆಗಲಿ ಗೆಲುವೇ ಆಗಲಿ ಸಂಯಮ ಮತ್ತು ಸ್ಫೂರ್ತಿಯಿಂದ ನಡೆದುಕೊಳ್ಳುವುದು ಅಗತ್ಯ ಎಂದು ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com