
ಶಾಂಘೈ: ಮಹಿಳಾ ಆರ್ಚರಿ ವಿಶ್ವ ಕಪ್ ಪಂದ್ಯದಲ್ಲಿ ಭಾರತೀಯ ಬಿಲ್ಲುಗಾರ್ತಿ ದೀಪಿಕಾ ಕುಮಾರಿ ಬುಧವಾರ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.
ಒಲಂಪಿಕ್ ಮತ್ತು ವಿಶ್ವ ಚಾಂಪಿಯನ್ ದಕ್ಷಿಣ ಕೊರಿಯಾದ ಕಿ ಬೊ-ಬೆ ಕಳೆದ ವರ್ಷ ಜುಲೈನಲ್ಲಿ ಮಾಡಿದ್ದ ದಾಖಲೆಯನ್ನು ದೀಪಿಕಾ ಸರಿಗಟ್ಟಿದ್ದಾರೆ. ಗರಿಷ್ಠ ೭೨೦ ಅಂಕಗಳಲ್ಲಿ ೨೧ ವರ್ಷದ ಬಿಲ್ವಿದ್ಯಾ ಪಟು ದೀಪಿಕಾ ೬೮೬ ಅಂಕ ಗಳಿಸಿ ದಾಖಲೆ ಸರಿಗಟ್ಟಿದ್ದಾರೆ.
ಕಳೆದ ವರ್ಷ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ್ದ ದೀಪಿಕಾ, ೨೦೧೧, ೨೦೧೨ ಮತ್ತು ೨೦೧೩ರ ವಿಶ್ವಕಪ್ ಆರ್ಚರಿಯಲ್ಲಿ ಬೆಳ್ಳಿ ಪದಕ ಗಳಿಸಿದ್ದರು.
ಕಳೆದ ವರ್ಷ ಕೋಪನ್ ಹೇಗನ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ತೋರಿದ ಪ್ರದರ್ಶನಕ್ಕೆ ದೀಪಿಕಾ ಈಗಾಗಲೇ ರಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ.
"ಮಾರ್ಚ್ ೨೦೧೬ ರಲ್ಲಿ ಜೆಮ್ ಶೆಡ್ ಪುರ ಮತ್ತು ದೆಹಲಿಯಲ್ಲಿ ಒಲಂಪಿಕ್ಸ್ ಆಯ್ಕೆಗಾಗಿ ನಡೆಸಿದ ಪರೀಕ್ಷೆಗಳಲ್ಲಿ ದೀಪಿಕಾ ೬೯೦/೭೨೦ ಅಂಕಗಳನ್ನು ಪಡೆದಿದ್ದರು" ಎಂದು ಬಾರತೀಯ ಆರ್ಚರಿ ಸಂಘ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.
"ಆರ್ಚರಿ ಪಂದ್ಯಗಳಿಗಾಗಿ ಭಾರತದಿಂದ ರಿಯೋ ಒಲಂಪಿಕ್ ಪಂದ್ಯಗಳಿಗೆ ಆಯ್ಕೆಯಾಗಿರುವ ನಾಲ್ವರಲ್ಲಿ ದೀಪಿಕಾ ಕೂಡ ಒಬ್ಬರು. ಈಗ ವಿಶ್ವಕಪ್ ನಲ್ಲಿ ಅವರು ತೋರಿರುವ ಪ್ರದರ್ಶನ ಮುಂದಿನ ಕ್ರೀಡೆಗಳಿಗೆ ಅವರ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ" ಎಂದು ಕೂಡ ಬಾರತೀಯ ಆರ್ಚರಿ ಸಂಘ ಹೇಳಿದೆ.
Advertisement