ಕೊನೆಗೂ ಸಿಂಧುಗೆ ತನ್ನಿಷ್ಟದ ಜಂಕ್ ಫುಡ್, ಐಸ್ ಕ್ರೀಮ್ ತಿನ್ನಲು ಒಪ್ಪಿಗೆ ಸಿಕ್ತು..

ಆಕೆಗೆ ಯಶಸ್ಸು ಸುಲಭವಾಗಿ ಸಿಗಲಿಲ್ಲ. ಕೋಚ್ ಅವಳ ಬಳಿಯಿದ್ದ ಮೊಬೈಲ್ ಫೋನನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು. ಆಕೆಯ ನೆಚ್ಚಿನ...
ಅಂತಿಮ ಪಂದ್ಯದಲ್ಲಿ ಸೋತಾಗ ಪಿ.ವಿ.ಸಿಂಧು ಅವರನ್ನು ಸಂತೈಸುತ್ತಿರುವ ಕೋಚ್ ಪುಲ್ಲೇಲ ಗೋಪಿಚಂದ್
ಅಂತಿಮ ಪಂದ್ಯದಲ್ಲಿ ಸೋತಾಗ ಪಿ.ವಿ.ಸಿಂಧು ಅವರನ್ನು ಸಂತೈಸುತ್ತಿರುವ ಕೋಚ್ ಪುಲ್ಲೇಲ ಗೋಪಿಚಂದ್
ರಿಯೊ ಡಿ ಜನೈರೊ: ಆಕೆಗೆ ಯಶಸ್ಸು ಸುಲಭವಾಗಿ ಸಿಗಲಿಲ್ಲ. ಕೋಚ್ ಅವಳ  ಬಳಿಯಿದ್ದ ಮೊಬೈಲ್ ಫೋನನ್ನು ತೆಗೆದುಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು. ಆಕೆಯ ನೆಚ್ಚಿನ ಐಸ್ ಕ್ರೀಮ್ ಮತ್ತು ಜಂಕ್ ಫುಡ್ ಕೂಡ ತಿನ್ನಲು ಬಿಡುತ್ತಿರಲಿಲ್ಲ. ಕಳೆದ 60 ದಿನಗಳಿಂದ ಅವಳ ಮನಸ್ಸಿನಲ್ಲಿದ್ದ ಗುರಿ ಒಂದೇ ಅದು ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಗಳಿಸುವುದು.
ಒಂದೊಂದು ಸಲ ಅವಳ ಪೋಷಕರಿಗೆ ಮಾತ್ರ ಫೋನ್ ಕರೆ ಮಾಡಲು ಅವಕಾಶವಿತ್ತು. ನಾವಿಲ್ಲಿ ಹೇಳಲು ಹೊರಟಿದ್ದು ಬೇರಾರ ವಿಷಯವೂ ಅಲ್ಲ, ಮಹಿಳೆಯರ ಸಿಂಗಲ್ಸ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಬೆಳ್ಳಿ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ ಪುಸರ್ಲ ವೆಂಕಟ ಸಿಂಧು ಬಗ್ಗೆ. ಸಿಂಧು ಜೀವನ ಹೆಚ್ಚಾಗಿ ಕಳೆದಿದ್ದು ಹಸಿರು ಹೊದಿಕೆಯ ಕೋರ್ಟ್ ನಲ್ಲಿ. 
ಪಿ.ವಿ.ಸಿಂಧು ಸೋಲಿನಲ್ಲಿ ಉದಾತ್ತ ಮನಸ್ಸು ತೋರುವವಳು. ಮೊನ್ನೆ ಅಂತಿಮ ಪಂದ್ಯದಲ್ಲಿ ಚಿನ್ನ ಗೆದ್ದ ಖುಷಿಯಲ್ಲಿ ಕ್ಯಾರೊಲಿನಾ ಮರಿನ್ ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಅಳುತ್ತಾ ಮಲಗಿದ್ದಾಗ ಸಿಂಧು ಹೋಗಿ ಪ್ರೀತಿಯಿಂದ ಮೈದಡವಿ ಎಬ್ಬಿಸಿ ಅಪ್ಪುಗೆ ನೀಡಿದ್ದಳು. ಇದೊಂದು ಸರಳ, ಸಣ್ಣ ಸೂಚನೆಯಷ್ಟೆ. ಆದರೆ ಆ ಸಂದರ್ಭದಲ್ಲಿ ಸಿಂಧುವಿನ ನಡತೆ ಮೆಚ್ಚುವಂತದ್ದಾಗಿತ್ತು. ತನ್ನ ಎದುರಿನವರು ತನ್ನನ್ನು ಸೋಲಿಸಿ ಖುಷಿಯಲ್ಲಿದ್ದಾಗ ಸಾಮಾನ್ಯವಾಗಿ ಅಂತಹ ಭಾವನೆ ಎಲ್ಲರಲ್ಲಿ ಬರುವುದಿಲ್ಲ. ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದದ್ದು ನನಗೆ ಸೊಗಸಾದ ಭಾವನೆಯಾಗಿದ್ದು, ಅದನ್ನು ಯಾವುದಕ್ಕೂ ಹೋಲಿಸಲು ಸಾಧ್ಯವಿಲ್ಲ. ಅದಕ್ಕೆ ಸಮನಾದುದು ಬೇರಾವುದೇ ಇಲ್ಲ ಎಂಬುದು ನನ್ನ ಭಾವನೆ ಎಂದು ಹೈದರಾಬಾದ್ ಮೂಲದ ಸಿಂಧು ಹೇಳಿದ್ದಾರೆ. ಆರಂಭದಲ್ಲಿ ಅವಳ ಆಟದಲ್ಲಿನ ಸ್ಥಿರತೆ ಬಗ್ಗೆ ಕೆಲವರಿಗೆ ಸಂಶಯವಿತ್ತು. ಆದರೆ ಒಲಿಂಪಿಕ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದು ಅವರ ಸಂಶಯವನ್ನೆಲ್ಲಾ ದೂರವಾಗಿಸಿತು.
ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದುದರ ಹಿಂದೆ ಸಿಂಧುವಿನ ಅಪಾರ ಪರಿಶ್ರಮ, ಕೋಚ್ ಪುಲ್ಲೇಲ ಗೋಪಿಚಂದ್ ನ ನಿರಂತರ ಮಾರ್ಗದರ್ಶನವಿದೆ. ''ನನ್ನ ಕಠಿಣ ಪರಿಶ್ರಮದಿಂದಾಗಿ ಈ ಸಾಧನೆ ಸಾಧ್ಯವಾಯಿತು. ನನಗೆ ತುಂಬಾ ಸಂತೋಷವಾಗುತ್ತಿದೆ. ಇದು ನನ್ನ ಮೊದಲನೆಯ ಒಲಿಂಪಿಕ್, ಅದರಲ್ಲಿ ಬೆಳ್ಳಿ ಪದಕ ಗೆದ್ದದ್ದು ಖುಷಿ ತಂದಿದೆ. ಚಿನ್ನ ಗೆಲ್ಲಬೇಕೆಂಬ ಗುರಿಯಿದ್ದವಳು ನಾನು, ಹಾಗಾಗಿ ಇದು ನನಗೆ ಬೇರೆಯದೇ ಭಾವನೆ ಕೊಡುತ್ತದೆ. ಆದರೂ ಪರವಾಗಿಲ್ಲ ಎನ್ನುತ್ತಾರೆ ಸಿಂಧು.
''ಕಳೆದ ಒಂದೂವರೆ ತಿಂಗಳಿನಿಂದ ನಮಗೆ ಯಾವುದೇ ಟೂರ್ನಮೆಂಟ್ ಇರಲಿಲ್ಲ. ಒಲಿಂಪಿಕ್ ಗಾಗಿ ನಾನು ಕೆಲವು ತ್ಯಾಗಗಳನ್ನು ಮಾಡಿದ್ದೇನೆ. ಪ್ರತಿಯೊಬ್ಬ ಕ್ರೀಡಾಪಟುವಿಗೂ ಒಲಿಂಪಿಕ್ ಸಂಪೂರ್ಣ ಭಿನ್ನ ಟೂರ್ನಮೆಂಟ್ ಆಗಿರುತ್ತದೆ, ನಮ್ಮ ಗುರಿ ಚಿನ್ನದ ಪದಕ ಗೆಲ್ಲುವುದಾಗಿರುತ್ತದೆ. ಇದೊಂದು ಕ್ಲಿಷ್ಟ ಆಟವಾಗಿತ್ತು, ಆದರೆ ನನಗೆ ನನ್ನ ಮೇಲೆ ನಂಬಿಕೆಯಿತ್ತು. ಗೋಪಿ ಸರ್ ಗೆ ನನ್ನ ಮೇಲೆ ನಂಬಿಕೆಯಿತ್ತು. ನಾವು ತುಂಬಾ ಕಠಿಣವಾಗಿ ತರಬೇತಿ ಪಡೆಯುತ್ತಿದ್ದೆ. ಚಿನ್ನ ಗೆಲ್ಲಲು ಸಾಧ್ಯವಾಗದಾಗ ಗೋಪಿ ಸರ್, ಚಿಂತಿಸಬೇಡ, ಒಂದು ಸಲಕ್ಕೆ ಒಂದು ಮ್ಯಾಚ್ ಅಷ್ಟೆ, ಅದೇ ಆಟದ ನಿಯಮ'' ಎಂದರು.
ಅಂತಿಮ ಪಂದ್ಯದಲ್ಲಿ ಮರಿನಾ ತಮಗಾದ ಮುಜುಗರದಿಂದ ಹೊರಬರಲು ಪದೇ ಪದೇ ಶಟ್ಲ್ ಬದಲಿಸುತ್ತಿದ್ದರು. ಅದಕ್ಕೆ ಸಿಂಧು ಕುರ್ಚಿ ಅಂಪೈರ್ ಗೆ ದೂರು ನೀಡಿದ್ದರು. ಈ ಬಗ್ಗೆ ಕೇಳಿದಾಗ, '' ಹೌದು, ನನಗೆ ತೋರಿಸದೆ ಅವರು ಶಟ್ಲ್ ಬದಲಾಯಿಸುತ್ತಿದ್ದರು. ಅದು ಸ್ವಲ್ಪ ಕಿರಿ ಕಿರಿ ತರುತ್ತಿತ್ತು. ಆದರೆ ಅದೆಲ್ಲಾ ಆಟದ ಭಾಗವಷ್ಟೆ. ಮರಿನಾ ನನ್ನ ಗಮನವನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದರು, ಅದನ್ನು ಸಾಮಾನ್ಯವಾಗಿ ಅವರು ಮಾಡುತ್ತಾರೆ. ಅದು ದೊಡ್ಡ ವಿಷಯವಲ್ಲ. ಅದರಿಂದ ನನಗೆ ಸಿಟ್ಟು ಬರಲಿಲ್ಲ. ಅವರು ನನಗೆ ತೋರಿಸದೆ ಶಟ್ಲ್ ಬದಲಾಯಿಸುತ್ತಿದ್ದರಿಂದ ನಾನು ಅಂಪೈರ್ ಗೆ ಹೇಳಿದೆ. ಆದರೆ ಅದು ನನ್ನ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿಲ್ಲ ಎನ್ನುತ್ತಾರೆ ಸಿಂಧು.
ಇದೊಂದು ಉತ್ತಮ ಆಟವಾಗಿತ್ತು. ಕ್ಯಾರೊಲಿನಾ ಮರಿನಾ ತುಂಬಾ ಚೆನ್ನಾಗಿ ಆಡಿದರು. ಪಂದ್ಯವೆಂದ ಮೇಲೆ ಒಬ್ಬರು ಗೆದ್ದು, ಮತ್ತೊಬ್ಬರು ಸೋಲಬೇಕು. ಅದು ಅವರ ದಿನವಾಗಿತ್ತು. ಒಟ್ಟಾರೆ ನನಗೆ ಇಡೀ ಪಂದ್ಯಾವಳಿ ಅದ್ಭುತವೆನಿಸಿತು. ನನ್ನ ಕೈಯಿಂದಾದಷ್ಟು ಮಟ್ಟಿಗೆ ಆಟವಾಡಿದ್ದೇನೆ, ಬೆಳ್ಳಿ ಪದಕ ಗೆದ್ದಿದ್ದೇನೆ. ನನಗೆ ತುಂಬಾ ಹೆಮ್ಮೆಯಿದೆ ಎಂದು ಸಿಂಧು ಉತ್ತರಿಸಿದರು.
ಆದರೆ ನಾನೊಂದು ತಪ್ಪು ಮಾಡಿದ್ದೇನೆ. ತುಂಬಾ ಅಂತರದಿಂದ ಮರೀನಾ ಮುಂದೆ ಹೋದರು. ನಾನು ಅಂತರವನ್ನು ಕಡಿಮೆಗೊಳಿಸಲು ಪ್ರಯತ್ನಿಸಿದರೂ ಆಕೆ ಅದನ್ನು ಕಾಪಾಡಿಕೊಳ್ಳುತ್ತಿದ್ದರು. ಎರಡನೇ ಪಂದ್ಯದಲ್ಲಿ ಸೋತರೂ ಕೂಡ ನಾನು ನಿರಾಯಾಸವಾಗಿ ಸೋಲೊಪ್ಪಿಕೊಳ್ಳಲಿಲ್ಲ. ಯಾಕೆಂದರೆ ಆಟದಲ್ಲಿ ಕೊನೆ ಗಳಿಗೆಯಲ್ಲಿ ಏನು ಬದಲಾವಣೆ ಬೇಕಾದರೂ ಆಗಬಹುದು. ಮೂರನೇ ಪಂದ್ಯದಲ್ಲಿ ಆಕೆ ತುಂಬಾ ಉತ್ತಮವಾಗಿ ಆರಂಭಿಸಿದರು. ಮಧ್ಯದಲ್ಲಿ 10-10 ಸಮಾನವಾಯಿತು. ನಂತರ ನಾನು ಕೆಲವು ತಪ್ಪುಗಳನ್ನು ಮಾಡಿದೆ. ಅವರು ನನ್ನಿಂದ ಮುಂದೆ ಹೋದರು ಎಂದು ತಮ್ಮ ಆಟದ ಬಗ್ಗೆ ವಿವರಿಸುತ್ತಾರೆ ಸಿಂಧು.
ತಮ್ಮ ಗೆಲುವಿನಲ್ಲಿ ಭಾಗಿಯಾದವರಿಗೆಲ್ಲ ಸಿಂಧು ಅಭಿನಂದನೆ ಹೇಳುತ್ತಾರೆ. ನನ್ನ ಕೋಚ್ ಮತ್ತು ಪೋಷಕರಿಗೆ ನಾನು ಕೃತಜ್ಞನಾಗಿರಬೇಕು. ಅವರು ನನಗಾಗಿ ಅನೇಕ ವಿಷಯಗಳನ್ನು ತ್ಯಾಗ ಮಾಡಿದ್ದಾರೆ. ನನಗೆ ಬೆಂಬಲ ನೀಡಿದ ಸಿಬ್ಬಂದಿಗೂ ಕೃತಜ್ಞತೆಗಳು. ಅವರಿಂದಾಗಿ ನಾನು ಇಂದು ಇಲ್ಲಿದ್ದೇನೆ. ಗೋಪಿಚಂದ್ ಅವರು ನನಗಾಗಿ ತುಂಬಾ ಸಹಾಯ ಮಾಡಿದ್ದಾರೆ. ಇಲ್ಲಿ ಸ್ಟೇಡಿಯಂನಲ್ಲಿ ಮತ್ತು ಭಾರತದಲ್ಲಿ ನನಗಾಗಿ ಹಾರೈಸಿದ ಜನತೆಗೆ ನನ್ನ ಅಭಿನಂದನೆಗಳು. ಭಾರತ ಸರ್ಕಾರ ಮತ್ತು ಭಾರತೀಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಗೆ ನನ್ನ ಕೃತಜ್ಞತೆಗಳು ಎಂದು ಹೇಳಲು ಸಿಂಧು ಮರೆಯಲಿಲ್ಲ.
ಒಲಿಂಪಿಕ್ ನಲ್ಲಿ ಮೊದಲ ಪಂದ್ಯದ ವೇಳೆ ಅಂತಿಮ ಹಂತಕ್ಕೆ ಹೋಗುತ್ತೇನೆ, ಕ್ಯಾರೊಲಿನಾ ಅವರ ಸೊತೆ ಸೆಣಸುತ್ತೇನೆ ಎಂದು ಭಾವಿಸಿರಲಿಲ್ಲ ಎನ್ನುವ ಸಿಂಧುಗೆ 2020ರಲ್ಲಿ ಜಪಾನ್ ನ ಟೋಕ್ಯೋದಲ್ಲಿ ನಡೆಯುವ ಒಲಿಂಪಿಕ್ ಮುಂದಿನ ಗುರಿ. ''ಸದ್ಯ ನಾನು ನನ್ನ ಊರಿನಲ್ಲಿದ್ದೇನೆ, ಕೋಚ್ ಗೋಪಿ ಸರ್ ಅನುಮತಿ ಕೊಟ್ಟಿದ್ದಾರೆ, ಹಾಗಾಗಿ ನಾನು ನನ್ನ ಇಷ್ಟದ ಜಂಕ್ ಫುಡ್ ಮತ್ತು ಐಸ್ ಕ್ರೀಮ್ ನ್ನು ಸ್ವಲ್ಪ ತಿನ್ನಬಹುದು'' ಎಂದು ನಗುತ್ತಾರೆ ಸಿಂಧು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com