ಬೆಂಗಳೂರು: ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಅಥ್ಲೀಟ್ ಸುಧಾ ಸಿಂಗ್ ಅವರಿಗೆ ಝಿಕಾ ವೈರಸ್ ಇಲ್ಲ ಎಂದು ಸ್ಪಷ್ಟಪಡಿಸಿರುವ ವೈದ್ಯರು, ಅವರು ಎಚ್.ಎನ್.ನಿಂದ ಬಳಲುತ್ತಿದ್ದಾರೆ ಎಂದು ಮಂಗಳವಾರ ಹೇಳಿದ್ದಾರೆ.
ಸುಧಾ ಸಿಂಗ್ ರಿಯೋದಿಂದ ಹಿಂದಿರುಗಿದ ನಂತರ ಬೆಂಗಳೂರಿನ ನಾಗರಬಾವಿಯಲ್ಲಿರುವ ಪೋರ್ಟಿಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು, ಅಥ್ಲೀಟ್ ಎಚ್ 1 ಎನ್ 1 ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ಪರಿವೀಕ್ಷಕ ಅಧಿಕಾರಿ ಡಾ.ಹರ್ಷವರ್ಧನ್ ಅವರು ಹೇಳಿದ್ದಾರೆ.
ಈ ಸಂಬಂಧ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಡಾ.ಹರ್ವವರ್ಧನ್ ಅವರು, ಸುಧಾ ಸಿಂಗ್ ಅವರು ಎಚ್ 1 ಎನ್ 1 ನಿಂದ ಬಳಲುತ್ತಿರುವುದು ಮಹಾರಾಷ್ಟ್ರದ ಪುಣೆಯಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಯ ವರದಿಯಿಂದ ದೃಢಪಟ್ಟಿದೆ. ಈಗ ಅವರಿಗೆ ಎಚ್1 ಎನ್ 1 ಗೆ ಚಿಕಿತ್ಸೆ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಇಂದು ಸಂಜೆ ಯುವಜನ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಆಸ್ಪತ್ರೆಗೆ ಭೇಟಿ, ಸುಧಾ ಸಿಂಗ್ ಅವರ ಆರೋಗ್ಯ ವಿಚಾರಿಸಿದರು.
ಈ ಹಿಂದೆ ಎಬೊಲಾ ವೈರಸ್ ವಿಶ್ವದ ನಿದ್ದೆಗೆಡಿಸಿತ್ತು. ಇದೀಗ ಬ್ರೆಜಿಲ್ ನಲ್ಲಿ ಝಿಕಾ ವೈರಸ್ ತಾಂಡವವಾಡುತ್ತಿದ್ದು, ಇದರಿಂದಾಗಿ ರಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಸುಧಾ ಸಹ ಝಿಕಾ ಜ್ವರಕ್ಕೆ ತುತ್ತಾಗಿರಬಹುದು ಎಂದು ಶಂಕಿಸಲಾಗಿತ್ತು.