ಬೆಂಗಳೂರು: ಭಾರತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಇದೀಗ ಅಭಿಮಾನಿಗಳ ಟೀಕೆಗೆ ಗುರಿಯಾಗಿದ್ದಾರೆ. ಕಾರಣ, ಚೀನಾ ಮೂಲದ ಮೊಬೈಲ್ ಕಂಪನಿಗೆ ಸೈನಾ ನೆಹ್ವಾಲ್ ರಾಯಭಾರಿಯಾಗಿದ್ದಕ್ಕೆ ಫೇಸ್ ಬುಕ್ ನಲ್ಲಿ ಕೆಲ ಅಭಿಮಾನಿಗಳು ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.
ಚೀನಾ ಉತ್ಪನ್ನಗಳಿಗೆ ಭಾರತದಲ್ಲಿ ವಿರೋಧಗಳು ವ್ಯಕ್ತವಾಗುತ್ತಿದ್ದು ಈ ಮಧ್ಯೆ ಸೈನಾ ತಾವು ರಾಯಭಾರಿಯಾಗಿರುವ ಕಂಪನಿಯ ಮೊಬೈಲ್ ಅನ್ನು ಕೈಯಲ್ಲಿ ಹಿಡಿದು ತೆಗೆಸಿಕೊಂಡಿದ್ದ ಚಿತ್ರವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು ಇದರ ಬೆನ್ನಲ್ಲೇ ಅವರಿಗೆ ಅಭಿಮಾನಿಗಳಿಂದ ಟೀಕೆಗಳು ವ್ಯಕ್ತವಾಗಿದೆ. ಕೆಲವರು ಸೈನಾ ಈ ಕಂಪನಿ ಜತೆಗಿನ ಒಪ್ಪಂದವನ್ನು ರದ್ದು ಮಾಡಬೇಕು ಎಂದೂ ಹೇಳಿದ್ದಾರೆ.
ಅಭಿಮಾನಿಯೊಬ್ಬುರ ದಯವಿಟ್ಟು ನೀವು ಚೀನಾ ಉತ್ಪನ್ನಗಳಿಗೆ ಪ್ರಾಯೋಜಕರಾಗಬೇಡಿ. ಇದು ದೇಶಕ್ಕೆ ಮಾರಕ ಎಂಬ ಸಂದೇಶಗಳನ್ನು ಹಾಕಿದ್ದಾರೆ.
ಮತ್ತೊಬ್ಬರು ಭಾರತದಲ್ಲಿ ತಯಾರಾದ ಉತ್ಪನ್ನಗಳನ್ನು ಪ್ರಚಾರ ಮಾಡುವುದನ್ನು ಬಿಟ್ಟು ಚೀನಾ ಮೂಲದ ಕಂಪನಿಗೆ ರಾಯಭಾರಿಯಾಗಿರುವುದಕ್ಕೆ ದೇಶದ್ರೋಹಿ ಎಂದು ಸಂದೇಶ ಹಾಕಿದ್ದಾರೆ.