
ಸಿಡ್ನಿ: ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಆಕೆಯ ಜತೆಗಾರ್ತಿ ಸ್ವಿಜರ್ಲೆಂಡ್‍ನ ಮಾರ್ಟಿನಾ ಹಿಂಗಿಸ್ ಜೋಡಿ ಸಿಡ್ನಿ ಇಂಟರ್‍ನ್ಯಾಷನಲ್ ಟೆನಿಸ್ ಟೂರ್ನಿಯಲ್ಲಿ ಉಪಾಂತ್ಯಕ್ಕೆ ಲಗ್ಗೆ ಹಾಕುವ ಮುಖೇನ ಮಹಿಳಾ ಡಬಲ್ಸ್ ವಿಭಾಗದಲ್ಲಿ ಸತತ 28 ಗೆಲುವು ಸಾಧಿಸಿ ವಿಶ್ವ ದಾಖಲೆಯನ್ನು ಸರಿಗಟ್ಟಿದೆ.
ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದಿರುವ ಸಾನಿಯಾಹಿಂಗಿಸ್ ಜೋಡಿ ಬುಧವಾರ ನಡೆದ ಕ್ವಾರ್ಟರ್ಫೈನಲ್ ಸುತ್ತಿ ನ ಪಂದ್ಯದಲ್ಲಿ ಚೀನಾದ ಚೆನ್ ಲಿಯಾಂಗ್ ಮತ್ತು ಶುಂಯೆೈ ಪೆಂಗ್ ಜೋಡಿ ವಿರುದ್ಧ 6-2, 6-3 ನೇರ ಸೆಟ್ ಗಳ ಜಯ ಪಡೆಯಿತು. ಇದರೊಂದಿಗೆ ಸಾನಿಯಾ ಜೋಡಿ ಐತಿಹಾಸಿಕ ಜಯ ಪಡೆಯಿತಲ್ಲದೆ, 1994ರಲ್ಲಿ ಅಮೆರಿಕದ ಪ್ಯೂರ್ಟೊ ರಿಕಾನ್ ಗಿಗಿ ಫರ್ನಾಂಡೀಸ್ ಮತ್ತು ಬೆಲಾರಸ್‍ನ ನಟಾಶಾ ಜ್ವೆರೆವಾ ಜೋಡಿ ನಿರ್ಮಿಸಿದ್ದ 28 ಪಂದ್ಯಗಳ ಸತತ ಗೆಲುವಿನ ದಾಖಲೆಯನ್ನು ಸಮಗೊಳಿಸಿತು. ಇನ್ನು ಪಂದ್ಯದ ಸಂಪೂರ್ಣ ಅವಧಿಯಲ್ಲಿ ತಮ್ಮ ಪ್ರಾಬಲ್ಯ ಮೆರೆದ ಇಂಡೋಸ್ವಿಸ್ ಜೋಡಿ, ಚೀನಾ ಜೋಡಿಗೆ ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಇದೀಗ ಮುಂದಿನ ಪಂದ್ಯದಲ್ಲಿ ಸಾನಿಯಾ ಹಾಗೂ ಹಿಂಗಿಸ್ ಟಿಮಿಯಾ ಬಾಬೊಸ್ ಮತ್ತು ಕಟ್ರಿನಾ ಜೋಡಿ ಸ್ರೆಬೊಟ್ನಿಕ್ ಹಾಗೂ ರಾಲುಕಾ ಒಲಾರು ಮತ್ತು ಯರೊಸ್ಲಾವಾ ಶ್ವೆಡೊವಾ ಜೋಡಿಯ ನಡುವಣ ಪಂದ್ಯದ ವಿಜೇತರೊಂದಿಗೆ ಸೆಣಸಲಿದೆ. ಕಳೆದ ವರ್ಷ ಸಾನಿಯಾ ಹಾಗೂ ಮಾರ್ಟಿನಾ ಜೋಡಿ 10 ಡಬ್ಲ್ಯೂಟಿಎ ಡಬಲ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಆ ಪೈಕಿ ಇಂಡಿಯಾನ ವೇಲ್ಸ್, ಮಿಯಾಮಿ, ಚಾರ್ಲೆಸ್ಟನ್, ವಿಂಬಲ್ಡನ್, ಯುಎಸ್ ಓಪನ್, ಗುವಾಂಗ್ಜೌ, ವುಹಾನ್, ಬೀಜಿಂಗ್ ಓಪನ್ ಗಳ ಜತೆಗೆ ಡಬ್ಲ್ಯೂಟಿಎ ಫೈನಲ್ಸ್ ಪ್ರಶಸ್ತಿ ಗೆದ್ದುಕೊಂಡಿತ್ತು. ಇನ್ನು ಪ್ರಸಕ್ತ ವರ್ಷದಲ್ಲಿ ಈಗಾಗಲೇ ಬ್ರಿಸ್ಬೇನ್ ಇಂಟರ್‍ನ್ಯಾಷನಲ್ ಟೂರ್ನಿಯನ್ನು ಗೆದ್ದಿದ್ದು, ಪ್ರಸಕ್ತ ಸಾಲಿನಲ್ಲಿ ಸತತ ಎರಡನೇ ಪ್ರಶಸ್ತಿಯ ಗುರಿ ಹೊಂದಿದೆ.
Advertisement