ಸೆಮಿಫೈನಲ್‍ನಲ್ಲಿ ವಿಶ್ವ ದಿಗ್ಗಜರ ಕಾದಾಟ?
ಮೆಲ್ಬೋರ್ನ್: ಐದು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಚ್ ಮತ್ತು ಮಾಜಿ ಚಾಂಪಿಯನ್ ರೋಜರ್ ಫೆಡರರ್, ಆಸ್ಟ್ರೇಲಿಯಾ ಓಪನ್ ಸೆಮಿಫೈನಲ್ ಸುತ್ತಿನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿದ್ದು, ಅಂತೆಯೇ ಮಹಿಳೆಯರ ವಿಭಾಗದಲ್ಲಿ ಮರಿಯಾ ಶರಪೋವಾ ಮತ್ತು ಏಳನೇ ಆಸ್ಟ್ರೇಲಿಯನ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ ವಿಲಿಯಮ್ಸ್ ಉಪಾಂತ್ಯದಲ್ಲಿ ಸೆಣಸುವ ಸಂಭವನೀಯತೆ ಇದೆ. ಶುಕ್ರವಾರ ಬಿಡುಗಡೆಯಾಗಿರುವ ಟೂರ್ನಿಯ ಪಂದ್ಯಗಳ ಡ್ರಾ ಪ್ರಕಾರ ಈ ನಾಲ್ವರು ಆಟಗಾರರು ಉಪಾಂತ್ಯದವರೆಗೂ ಪ್ರವೇಶಿಸಿದರೆ, ಪರಸ್ಪರ ಕಾದಾಡಲಿದ್ದಾರೆ. ಕಳೆದ ವರ್ಷ ಜೊಕೊವಿಚ್ ಮೂರು ಗ್ರಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದು, 82-6 ಗೆಲವು ಸೋಲಿನ ಸರಾಸರಿ ಹೊಂದಿದ್ದಾರೆ. ಇನ್ನು ಬ್ರಿಟನ್‍ನ ಆ್ಯಂಡಿ ಮರ್ರೆ, ಕ್ವಾರ್ಟರ್ಫೆೈನಲ್ ನಲ್ಲಿ ಸ್ಪೇನ್‍ನ ಡೇವಿಡ್ ಫೆರರ್ ಅವರನ್ನು ಎದುರಿಸಲಿದ್ದಾರೆ. ಇನ್ನು ಅಂತಿಮ ಎಂಟರ ಘಟ್ಟದಲ್ಲಿ ರಾಫೆಲ್ ನಡಾಲ್, ಸ್ಟಾನಿಸ್ಲಾಸ್ ವಾವ್ರಿಂಕಾ ಅವರನ್ನು ಎದುರಿಸಲಿದ್ದಾರೆ. ಯೂಕಿಗೆ ಕಠಿಣ ಸವಾಲು: ಇನ್ನು ಭಾರತದ ಯುವ ಆಟಗಾರ ಯೂಕಿ ಭಾಂಬ್ರಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಕಠಿಣ ಸವಾಲು ಎದುರಿಸಬೇಕಿದೆ. ವಿಶ್ವ ರ್ಯಾಂಕಿಂಗ್‍ನಲ್ಲಿ 95ನೇ ಸ್ಥಾನದಲ್ಲಿರುವ ಯೂಕಿ, ಜೆಕ್ ಗಣರಾಜ್ಯದ 6ನೇ ರ್ಯಾಂಕಿಂಗ್‍ನ ಥಾಮಸ್ ಬೆರ್ಡಿಚ್ ವಿರುದ್ಧ ಸೆಣಸಲಿದ್ದಾರೆ. ಈ ಬಾರಿ ಅಗ್ರ 100ರಲ್ಲಿ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಭಾಂಬ್ರಿ ನೇರವಾಗಿ ಪ್ರಮುಖ ಸುತ್ತಿಗೆ ಪ್ರವೇಶಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ