ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷೆ ಸ್ಥಾನಕ್ಕೆ ಅಂಜು ಬಾಬಿ ಜಾರ್ಜ್ ರಾಜಿನಾಮೆ

ಇತ್ತೀಚಿಗಷ್ಟೇ ಕೇರಳ ಕ್ರೀಡಾ ಸಚಿವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರು...
ಅಂಜು ಬಾಬಿ ಜಾರ್ಜ್
ಅಂಜು ಬಾಬಿ ಜಾರ್ಜ್
ತಿರುವನಂತಪುರಂ: ಇತ್ತೀಚಿಗಷ್ಟೇ ಕೇರಳ ಕ್ರೀಡಾ ಸಚಿವರ ವಿರುದ್ಧ ಕಿರುಕುಳದ ಆರೋಪ ಮಾಡಿದ್ದ ಖ್ಯಾತ ಒಲಿಂಪಿಕ್ಸ್ ಆಟಗಾರ್ತಿ ಅಂಜು ಬಾಬಿ ಜಾರ್ಜ್ ಅವರು ಕೇರಳ ಕ್ರೀಡಾ ಮಂಡಳಿ ಅಧ್ಯಕ್ಷೆ ಸ್ಥಾನಕ್ಕೆ ಬುಧವಾರ ರಾಜಿನಾಮೆ ನೀಡಿದ್ದಾರೆ.
ಇಂದು ನಡೆದ ಕೇರಳ ಕ್ರೀಡಾ ಮಂಡಳಿಯ ಸದಸ್ಯರ ಸಭೆಯೊಂದರಲ್ಲಿ ಅಂಜು ಬಾಬಿ ಜಾರ್ಜ್ ಅವರು ತಮ್ಮ ರಾಜಿನಾಮೆ ನಿರ್ಧಾರವನ್ನು ಘೋಷಿಸಿದ್ದಾರೆ. 
'ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕ್ರೀಡಾ ಇಲಾಖೆಯಲ್ಲಿ ನನಗಾದ ಅವಮಾನಗಳನ್ನು ಸಹಿಸಿಕೊಂಡು ಇಷ್ಟು ಸಮಯ ನನ್ನಿಂದ ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದೇನೆ. ಆದರೆ ಇನ್ನು ಮುಂದೆಯೂ ಇದನ್ನು ಸಹಿಸಿಕೊಂಡು ಕೆಲಸ ಮಾಡಲು ಸಾಧ್ಯವಿಲ್ಲ. ಹೀಗಾಗಿ ಅಧ್ಯಕ್ಷೆ ಹುದ್ದೆಗೆ ರಾಜಿನಾಮೆ ನೀಡುತ್ತಿದ್ದೇನೆ' ಎಂದು ಅಂಜು ಬಾಬಿ ಜಾರ್ಜ್ ಅವರು ಸದಸ್ಯರ ಸಭೆಯಲ್ಲಿ ಹೇಳಿರುವುದಾಗಿ ವರದಿ ಮಾಡಲಾಗಿದೆ.
2015ರಲ್ಲಿ ಉಮನ್ ಚಾಂಡಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ನಂತರ ಅಂಜು ಬಾಬಿ ಜಾರ್ಜ್ ಅವರನ್ನು ಕೇರಳದ ಕ್ರೀಡಾ ಮಂಡಳಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿತ್ತು. ಅಂಜು ಪ್ರಸ್ತುತ ಬೆಂಗಳೂರಿನಲ್ಲಿ  ಕಸ್ಟಮ್ಸ್ ಹಾಗೂ ಕೇಂದ್ರೀಯ ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 
39 ವರ್ಷದ ಅಂಜು ಬಾಬಿ ಜಾರ್ಜ್ ಅವರಿಗೆ 2003ರಲ್ಲಿ ಅರ್ಜುನ್ ಪ್ರಶಸ್ತಿ, 2004ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗೂ ಇನ್ನಿತರ ಹಲವಾರು ಪ್ರಶಸ್ತಿಗಳು ಲಭಿಸಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com