
ನವದೆಹಲಿ: ಜಿಂಬಾಬ್ವೆ ಆಟಗಾರ ಡಂಕನ್ ಫ್ಲೆಚರ್ ತೆರವು ಮಾಡಿದಾಗಲಿಂದಲೂ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಭರ್ತಿಯಾಗದೆ ಇರುವ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ತರಬೇತುದಾರ ಹುದ್ದಗೆ ಸೂಕ್ತ ಅಭ್ಯರ್ಥಿ ಎಂದು ರಾಹುಲ್ ದ್ರಾವಿಡ್ ಅವರನ್ನು ಖ್ಯಾತ ಆಫ್ ಸ್ಪಿನ್ ಬೌಲರ್ ಹರಭಜನ್ ಸಿಂಗ್ ಬೆಂಬಲಿಸಿದ್ದಾರೆ.
ಅಲ್ಲದೆ ಬೌಲಿಂಗ್ ತರಬೇತುದಾರ ಸ್ಥಾನಕ್ಕೆ ಇತ್ತೀಚೆಗಷ್ಟೇ ನಿವೃತ್ತಿಯಾದ ಜಹೀರ್ ಖಾನ್ ಸೂಕ್ತ ಎಂದಿದ್ದಾರೆ.
"ನನ್ನ ವ್ಯಯಕ್ತಿಕ ಅಭಿಪ್ರಾಯದ ಪ್ರಕಾರ, ಮುಖ್ಯ ತರಬೇತುದಾರ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಅತ್ಯುತ್ತಮ ಅಭ್ಯರ್ಥಿ ಮತ್ತು ಬೌಲಿಂಗ್ ವಿಭಾಗಕ್ಕೆ ಜಹೀರ್ ಖಾನ್ ಸೂಕ್ತ. ಆದರೆ ಇದು ನನ್ನಿಚ್ಚೆಯಷ್ಟೇ. ಬಿಸಿಸಿಐನಲ್ಲಿ ಈ ಕೆಲಸಕ್ಕಾಗಿಯೇ ಇರುವವರ ಮೇಲೆ ಎಲ್ಲವೂ ನಿಂತಿದೆ" ಎಂದು ಪಂಜಾಬಿನ ಬೌಲರ್ ಹೇಳಿದ್ದಾರೆ.
ಸದ್ಯಕ್ಕೆ ೧೯ ವರ್ಷದೊಳಗಿನ ಭಾರತೀಯ ತಂಡದ ಕೋಚ್ ಆಗಿರುವ ದ್ರಾವಿಡ್ ಐ ಪಿ ಎಲ್ ನಲ್ಲಿ ಜಹೀರ್ ಖಾನ್ ನೇತೃತ್ವದ ದೆಹಲಿ ಡೇರ್ ಡೆವಿಲ್ಸ್ ತಂಡಕ್ಕೆ ಸಲಹೆಗಾರ ಕೂಡ.
ಕಳೆದ ಜನವರಿಯಲ್ಲಿ ೧೯ ವರ್ಷದೊಳಗಿನ ಭಾರತೀಯ ತಂಡವನ್ನು ವಿಶ್ವಕಪ್ ನಲ್ಲಿ ಫೈನಲ್ಸ್ ವರೆಗೂ ಕೊಂಡೊಯ್ದಿದ್ದ ದ್ರಾವಿಡ್ ಅವರಿಗೆ ಭಡ್ತಿ ನೀಡಲಾಗುತ್ತದೆ ಎಂದೇ ಊಹಿಸಲಾಗಿತ್ತು. ಅಲ್ಲದೆ ಇತ್ತೀಚೆಗಷ್ಟೇ ವಿರಾಟ್ ಕೊಹ್ಲಿ ನ್ಯೂಜೀಲ್ಯಾಂಡ್ ಕ್ರಿಕೆಟರ್ ಡೇನಿಯಲ್ ವೆಟ್ಟೊರಿ ಅವರನ್ನು ಮುಖ್ಯ ತರಬೇತುದಾರ ಹುದ್ದೆಗೆ ಸೂಕ್ತ ಎಂದಿದ್ದರು.
Advertisement