
ಮಾಸ್ಕೋ: ರಷ್ಯಾ ಟೆನಿಸ್ ಫೆಡರೇಷನ್ ನ ಮುಖ್ಯಸ್ಥ ಶಮಿಲ್ ತರ್ಪಿಸ್ಚೇವ್ ತಮ್ಮ ಈ ಹಿಂದಿನ ಹೇಳಿಕೆಯನ್ನು ಹಿಂತೆಗೆದುಕೊಂಡಿದ್ದು, ಮರಿಯಾ ಶರಪೋವಾ ಅವರು ಡೋಪಿಂಗ್ ಪರೀಕ್ಷೆಯಲ್ಲಿ ವಿಫಲವಾಗಿದ್ದು ಅವರ ವೃತ್ತಿ ಕೊನೆಗೊಳ್ಳಬಹುದು ಎಂಬರ್ಥದಲ್ಲಿ ತಾವು ಹೇಳಿಲ್ಲ ಎಂದಿದ್ದಾರೆ.
ಶರಪೋವಾ ಅವರ ಪರಿಸ್ಥಿತಿ ಕೆಟ್ಟದಾಗಿದ್ದು, ಅವರು ತಮ್ಮ ವೃತ್ತಿಯನ್ನು ಮತ್ತೆ ಆರಂಭಿಸಬಹುದು ಎಂಬ ಬಗ್ಗೆ ಸಂಶಯವಿದೆ ಎಂಬುದಾಗಿ ಶಮಿಲ್ ಹೇಳಿದ್ದಾರೆ ಎಂದು ರಷ್ಯಾದ ಸುದ್ದಿಸಂಸ್ಥೆ ಆರ್-ಸ್ಪೋರ್ಟ್ ವರದಿ ಮಾಡಿತ್ತು.
ಅವರು ಸದ್ಯಕ್ಕೆ ಆಟವಾಡಲು ಸಾಧ್ಯವಿಲ್ಲ ಯಾಕೆಂದರೆ ಅವರ ಕೇಸಿಗೆ ಸಂಬಂಧಪಟ್ಟಂತೆ ಯಾವುದೇ ಆದೇಶ ಹೊರಡಿಸಿಲ್ಲ ಎಂದಷ್ಟೇ ಹೇಳಿದ್ದೇನೆ ಎಂದು ಟರ್ಪಿಸ್ಚೇವ್ ಟಾಸ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಕಳೆದ ಜನವರಿಯಲ್ಲಿ ಉದ್ದೀಪನ ಔಷಧ ಸೇವನೆ ಪರೀಕ್ಷೆಯಲ್ಲಿ ಶರಪೋವಾ ಸಿಕ್ಕಿಹಾಕಿಕೊಂಡಿದ್ದರು. ತಾವು ದಶಕಗಳಿಂದ ಔಷಧವನ್ನು ಆರೋಗ್ಯ ಸಂಬಂಧ ಸೇವಿಸುತ್ತಿದ್ದ ಅದು ನಿಷೇಧವಾಗಿದೆ ಎಂದು ತಮಗೆ ಗೊತ್ತಿರಲಿಲ್ಲ ಎಂದು ಶರಪೋವಾ ಅವರೇ ಒಪ್ಪಿಕೊಂಡಿದ್ದರು.
ಅಂತಾರಾಷ್ಟ್ರೀಯ ಟೆನಿಸ್ ಫೆಡರೇಷನ್ ನಿಂದ ತೀರ್ಪು ಹೊರಬರಲು ಬಾಕಿಯಿದ್ದು, ಶರಪೋವಾ ಅವರು ಸದ್ಯ ಪಂದ್ಯಗಳಿಂದ ಅಮಾನತಿನಲ್ಲಿದ್ದಾರೆ.
Advertisement