ನವದೆಹಲಿ: ಮುಂಬರುವ ರಿಯೋ ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ಗೆದ್ದವರನ್ನು ಪ್ರಸಕ್ತ ವರ್ಷದ ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಗಾಗಿ ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ಮಂಗಳವಾರ ಹೇಳಿದೆ.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗಳಿಸಿಯೂ ಪ್ರಶಸ್ತಿ ಪಡೆಯಲು ಇನ್ನೊಂದು ವರ್ಷ ಕಾಯುವುದನ್ನು ತಪ್ಪಿಸುವುದಕ್ಕಾಗಿ ಈ ವರ್ಷವೇ ಒಲಿಂಪಿಕ್ಸ್ ಪದಕ ಗೆದ್ದವರನ್ನು ಪ್ರಶಸ್ತಿಗೆ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
ಈ ಕ್ರೀಡಾಕೂಟದಲ್ಲಿ ವೈಯಕ್ತಿಕ ಸ್ಪರ್ಧೆಗಳಲ್ಲಿ ಪದಕ ಗೆದ್ದವರು ಈಗಾಗಲೇ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪರಿಗಣನೆಯಾಗದೇ ಇದ್ದರೆ ಅವರನ್ನು ಪ್ರಸ್ತುತ ಪ್ರಶಸ್ತಿಗೆ ಪರಿಗಣಿಸಲಾಗುವುದು.
ತಂಡಗಳಲ್ಲಿ ಪದಕ ಗೆದ್ದವರು ಈಗಾಗಲೇ ಅರ್ಜುನ ಪ್ರಶಸ್ತಿಗೆ ಪಾತ್ರರಾಗದೇ ಇದ್ದರೆ ಅಂಥವರಿಗೆ ಅರ್ಜುನ ಪ್ರಶಸ್ತಿ ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.