
ನವದೆಹಲಿ: ತಾವು ಅನುಭವಿಸಿದ ಲೈಂಗಿಕ ಕಿರುಕುಳಗಳ ಬಗ್ಗೆ ಯಾವುದೇ ಹೆಣ್ಣು ಮಕ್ಕಳು ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಆದರೆ ಕೆಲವು ಜನಪ್ರಿಯ ವ್ಯಕ್ತಿಗಳು ಮಾತ್ರ ಇಂಥಹ ಕಹಿ ಘಟನೆಗಳನ್ನು ಬಹಿರಂಗ ಪಡಿಸುತ್ತಾರೆ.
ಹಿರಿಯ ಬಾಕ್ಸಿಂಗ್ ಪಟು ಮೇರಿ ಕೋಮ್, ಯೌವ್ವನದಲ್ಲಿ ತಾವು ಅನುಭವಿಸಿದ ಲೈಂಗಿಕ ಕಿರುಕುಳದ ಕುರಿತು ತಮ್ಮ ಪುತ್ರರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ತರಬೇತಿ ಶಿಬಿರಕ್ಕೆ ಸೈಕಲ್ ರಿಕ್ಷಾದಲ್ಲಿ ನನ್ನ ಪಾಡಿಗೆ ನಾನು ಬೆಳಗ್ಗೆ ಹೋಗುತ್ತಿದ್ದೆ. ಈ ವೇಳೆ ಎದುರಿಗೆ ಬಂದ ಆಪರಿಚಿತನೊಬ್ಬ ಏಕಾ ಏಕಿ ನನ್ನ ಎದೆಯ ಮೇಲೆ ಕೈ ಹಾಕಿ ಜೋರಾಗಿ ಅದುಮಿ ಓಡಿಹೋದ. ಕೋಪಗೊಂಡು ನಾನು ಸೈಕಲ್ ರಿಕ್ಷಾ ದಿಂದ ಇಳಿದು ನನ್ನ ಚಪ್ಪಲಿಯನ್ನು ಕೈಯ್ಯಲ್ಲಿ ಹಿಡಿದುಕೊಂಡು ಆತನ ಹಿಂದೆ ಓಡಿದೆ. ಆದರೆ ಅವನನ್ನು ಹಿಡಿಯಲಾಗಲಿಲ್ಲ, ಹೇಗೋ ಅವನು ತಪ್ಪಿಸಿಕೊಂಡು ಓಡಿ ಹೋದ. ನಾನು ಕರಾಟೆ ಕಲಿತಿದ್ದರು ಆತನನ್ನು ಹಿಡಿಯಲು ಸಾಧ್ಯವಾಗದೇ ಇದ್ದದ್ದು ನನಗೆ ತುಂಬಾ ಬೇಸರ ತರಿಸಿತು ಎಂದು ಹೇಳಿಕೊಂಡಿದ್ದಾರೆ.
ಎಲ್ಲಾ ಸಮಯಗಳಲ್ಲೂ ಹೆಣ್ಣು ಮಕ್ಕಳೇ ಹೆಚ್ಚಿಗೆ ಕಿರುಕುಳಕ್ಕೊಳಗಾಗುವುದು ಎಂದು ಅವರು ಪತ್ರದಲ್ಲಿ ಬೇಸರ ವ್ಯಕ್ತ ಪಡಿಸಿದ್ದಾರೆ. ನಾನು ಬೆಳೆದು ದೊಡ್ಡವಳಾದ ಮೇಲೆ ಗೊತ್ತಾಯಿತು, ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಶಿಕ್ಷಾರ್ಹ ಅಪರಾಧ ಎಂದು, ಯಾವುದೇ ಹೆಣ್ಣು ಮಕ್ಕಳಿಗೆ ಕಿರುಕುಳ ಉಂಟಾಗುತ್ತಿದೆ ಎಂದು ನಿಮಗೆ ಅನ್ನಿಸಿದರೇ ಕೂಡಲೇ ಅವರ ಸಹಾಯಕ್ಕೆ ಧಾವಿಸಿ ಎಂದು ತಮ್ಮ ಗಂಡು ಮಕ್ಕಳಿಗೆ ಮೆರಿಕೋಮ್ ಆಗ್ರಹಸಿದ್ದಾರೆ. ದೆಹಲಿಯಲ್ಲಿ ಹೆಣ್ಣುಮಗಳೊಬ್ಬಳಿಗೆ ವ್ಯಕ್ತಿಯೊಬ್ಬ ಹಲವು ಬಾರಿ ಚಾಕುವಿನಿಂದ ಇರಿಯುತ್ತಿದ್ದರೂ ಸುತ್ತಮುತ್ತ ಜನರಿದ್ದರೂ, ಯಾರೊಬ್ಬರು ಆಕೆಯ ಸಹಾಯಕ್ಕೆ ಬರಲಿಲ್ಲ ಎಂದು ಮೆರಿಕೋಮ್ ನೊಂದು ಬರೆದಿದ್ದಾರೆ.
ಇನ್ನು ತಮ್ಮ ಪತಿಯ ಬಗ್ಗೆ ಪತ್ರದಲ್ಲಿ ಬರೆದಿರುವ ಮೆರಿಕೋಮ್ ಆಕೆಯನ್ನು ಪತಿಯಾಗಿ ಪಡೆದದ್ದು ತಮ್ಮ ಅದೃಷ್ಟ, ಪ್ರತಿಯೊಂದು ಹಂತದಲ್ಲೂ ನನ್ನ ಜೊತೆಗಿದ್ದು ಅವರು ನೆರವಾಗಿದ್ದಾರೆ. ನನಗಾಗಿ ಮತ್ತು ಕುಟುಂಬಕ್ಕಾಗಿ ದೊಡ್ಡ ತ್ಯಾಗ ಮಾಡಿದ್ದಾರೆ ಎಂದು ಹೇಳಿದ್ದಾರೆ.
Advertisement