ಚಂಡೀಘರ್: ಭಾರತೀಯ ಕ್ರೀಡಾ ಪ್ರಾಧಿಕಾರದ ಅಡಿಯಲ್ಲಿ, ದೆಹಲಿಯಿಂದ ೭೦ ಕಿಲೋ ಮೀಟರ್ ದೂರದಲ್ಲಿರುವ ಹರ್ಯಾಣದ ರೋಥಕ್ ಪಟ್ಟಣದಲ್ಲಿ ರಾಷ್ಟ್ರಿಯ ಬಾಕ್ಸಿಂಗ್ ಪ್ರಾಧಿಕಾರವನ್ನು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವ ವಿಜಯ್ ಗೋಯಲ್ ಸೋಮವಾರ ಉದ್ಘಾಟಿಸಿದ್ದಾರೆ.
೨೦೨೦, ೨೦೨೪ ಮತ್ತು ೨೦೨೮ ರಲ್ಲಿ ನಡೆಯಲಿರುವ ಒಲಂಪಿಕ್ಸ್ ಕ್ರೀಡೆಗಳಿಗೆ ಕೇಂದ್ರ ಸರ್ಕಾರ ನೀಲಿನಕ್ಷೆ ಸಿದ್ಧಪಡಿಸಿದೆ ಎಂದು ಗೋಯಲ್ ಹೇಳಿದ್ದಾರೆ. "ಭಾರತೀಯ ಬಾಕ್ಸರ್ ಗಳಿಗೆ ಬಾಕ್ಸಿಂಗ್ ಪ್ರಾಧಿಕಾರ ಚಿನ್ನದ ವೇದಿಕೆಯಾಗಲಿದೆ" ಎಂದು ಕೂಡ ಕೇಂದ್ರ ಸಚಿವ ನುಡಿದಿದ್ದಾರೆ.
ಹರ್ಯಾಣ ಇತ್ತೀಚಿನ ವರ್ಷಗಳಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಬಾಕ್ಸರ್ ಗಳನ್ನು ಹೊರಹೊಮ್ಮಿಸಿದೆ ಆದುದರಿಂದ ಬಾಕ್ಸಿಂಗ್ ಪ್ರಾಧಿಕಾರವನ್ನು ಇಲ್ಲೇ ಅಭಿವೃದ್ಧಿಪಡಿಸಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ.
ವಿಜೇಂದರ್ ಸಿಂಗ್, ಅಖಿಲ್ ಕುಮಾರ್, ಜಿತೇಂದರ್ ಕುಮಾರ್, ರಾಜಕುಮಾರ್ ಮತ್ತು ಸುಮಿತ್ ಸಂಗ್ವಾನ್ ಎಲ್ಲರು ಹರ್ಯಾಣ ಮೂಲದವರೇ ಆಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಗೌರವ ತಂದುಕೊಟ್ಟಿದ್ದಾರೆ ಎಂದು ಗೋಯಲ್ ಹೇಳಿದ್ದಾರೆ.
ದೆಹಲಿಯ ಗುರುಗೋವಿಂದ ಸಿಂಗ್ ಇಂದ್ರಪ್ರಸ್ಥ ವಿಶ್ವವಿದ್ಯಾಲಯದ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಈ ಸಹಯೋಗದಲ್ಲಿ ಎಲ್ಲ ಆಟಗಾರರನ್ನು ಸಜ್ಜುಪಡಿಸಲಾಗುತ್ತದೆ ಎಂದಿದ್ದಾರೆ.
"ಈ ಪ್ರಾಧಿಕಾರದಲ್ಲಿ ಪುಸ್ತಕಗಳು, ಬ್ಯಾಡ್ಮಿಂಟನ್ ಆವರಣ, ವಾಲಿಬಾಲ್ ಆವರಣ, ಚೆಸ್, ಇಂಟರ್ನೆಟ್ ವ್ಯವಸ್ಥೆಗಳನ್ನು ಕೂಡ ಮಾಡಲಾಗುವುದು" ಎಂದು ಗೋಯಲ್ ತಿಳಿಸಿದ್ದಾರೆ.