ಸಿಯೋಲ್(ದಕ್ಷಿಣ ಕೊರಿಯಾ): ಕೊರಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಮಹಿಳೆಯರ ವಿಬಾಗದ ಸಿಂಗಲ್ಸ್ ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿ ಪ್ರಶಸ್ತಿಯ ಭರವಸೆ ಮೂಡಿಸಿದ್ದ ಭಾರತದ ಭರವಸೆಯ ಆಟಗಾರ್ತಿ ಸೈನಾ ನೆಹ್ವಾಲ್ ಶುಕ್ರವಾರ ನಡೆದ ಪಂದ್ಯದಲ್ಲಿ ಸೋಲು ಅನುಬವಿಸಿ ನಿರಾಶೆ ಮೂಡಿಸಿದ್ದಾರೆ.
ಕ್ವಾರ್ಟರ್ ಫೈನಲ್ಸ್ ಕದನದಲ್ಲಿ ಸೈನಾ ಜಪಾನ್‌ನ ನೊಜೊಮಿ ಒಕುಹರಾ ವಿರುದ್ಧ 21-15, 15-21, 20-22ರಿಂದ ಮಣಿದು ಕ್ರೀಡಾಕೂಟದಿಂದಲೇ ಹೊರನಡೆದಿದ್ದಾರೆ.
5ನೇ ಶ್ರೇಯಾಂಕಿತೆಯಾದ ಸೈನಾ ನೆಹ್ವಾಲ್, 3ನೇ ಶ್ರೇಯಾಂಕಿತೆಯಾದ ನೊಜೊಮಿ ವಿರುದ್ಧ ಸೆಣೆಸಿದ್ದು ಕಳೆದ ಒಂಭತ್ತು ಬಾರಿಯ ಮುಖಾಮುಖಿಯಲ್ಲಿ ಏಳು ಬಾರಿ ಸೈನಾ ಜಯ ಸಾಧಿಸಿದ್ದರು.
ಒಟ್ಟು 59 ನಿಮಿಷ ಕಾಲ ಸಾಗಿದ್ದ ಪಂದ್ಯದಲ್ಲಿ ಸೈನಾ ಮೊದಲ ಸೆಟ್ ಗೆಲ್ಲುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಲು ಯತ್ನಿಸಿದ್ದರಾದರೂ ತೀವ್ರ ಹಣಾಹಣಿಯಿದ್ದ ಅಂತಿಮ ಸೆಟ್ ಅನ್ನು ಕೈಚೆಲ್ಲಿದರು. ಪಂದ್ಯದ ನಡುವೆ ನಾಲ್ಕು ಬಾರಿ ಸೈನಾ ತಮಗೊಲಿದಿದ್ದ ಮ್ಯಾಚ್ ಪಾಯಿಂಟ್ ಗಳನ್ನು ಬಿಟ್ಟುಕೊಟ್ಟು ಪ್ರೇಕ್ಷರಲ್ಲಿ ಆಘಾತ ಮೂಡಿಸಿದ್ದರು.
ಈ ವರ್ಷದ ಇಂಡೋನೇಷಿಯಾ ಮಾಸ್ಟರ್ಸ್ ನಲ್ಲಿ ರನ್ನರ್ ಅಪ್ ಆಗಿದ್ದ ಸೈನಾ ಗೋಲ್ಡ್ ಕೋಸ್ಟ್ ನಲ್ಲಿ ನಡೆದಿದ್ದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದರು. ಇನ್ನು ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಸಹ ಕಂಚಿನ ಪದಕ ಗಳಿಸಿ ಸಾಧನೆ ಮೆರೆದಿದ್ದರು.
ಸೈನಾ ನೆಹ್ವಾಲ್ ಸೋಲಿನೊಡನೆ ಕೊರಿಯಾ ಓಪನ್ ಟೂರ್ನಿಯಲ್ಲಿ ಭಾರತದ ಅಭಿಯಾನ ಅಂತ್ಯವಾಗಿದೆ.