ಸೌರಭ್ ಹಾಗೂ ರಾಹಿ ಸರ್ನೋಬತ್
ಕ್ರೀಡೆ
ಶೂಟಿಂಗ್ ವಿಶ್ವಕಪ್: ಚಿನ್ನ ಗೆದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ರಾಹಿ, ಸೌರಭ್ ಹೊಸ ವಿಶ್ವದಾಖಲೆ
ಜರ್ಮನಿಯ ಮ್ಯೂನಿಚ್‌ನಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ (ಐಎಸ್‌ಎಸ್‌ಎಫ್) ವತಿಯಿಂದ ನಡೆದ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ರಾಹಿ ...
ಮ್ಯೂನಿಚ್: ಜರ್ಮನಿಯ ಮ್ಯೂನಿಚ್‌ನಲ್ಲಿ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟದ (ಐಎಸ್‌ಎಸ್‌ಎಫ್) ವತಿಯಿಂದ ನಡೆದ ಶೂಟಿಂಗ್ ವಿಶ್ವಕಪ್ ನಲ್ಲಿ ಭಾರತದ ರಾಹಿ ಸರ್ನೋಬತ್ ಮತ್ತು ಸೌರಭ್ ಚೌಧರಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಮಹಿಳಾ ವಿಭಾಗದ 25 ಮೀ. ಪಿಸ್ತೂಲ್ ಸ್ಪರ್ಧೆಯಲ್ಲಿ ರಾಹಿ ಬಂಗಾರದೊಂದಿಗೆ 2022ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪುರುಷರ ವಿಭಾಗದ 10 ಮೀ. ಏರ್ ಪಿಸ್ತೂಲ್‌ನಲ್ಲಿ 17ರ ಹರೆಯದ ಸೌರಭ್ ಸ್ವರ್ಣದ ಪದಕ ತಮ್ಮದಾಗಿಸಿಕೊಂಡಿದ್ದರು.
ಈ ಎರಡೂ ಚಿನ್ನದ ಪದಕಗಳು ಸೇರಿದಂತೆ ಪ್ರಸ್ತುತ ಟೂರ್ನಿಯಲ್ಲಿ ಭಾರತಕ್ಕೆ ಒಟ್ಟು ಮೂರು ಚಿನ್ನದ ಪದಕ ಸಂದಿವೆ. 246.3 ಪಾಯಿಂಟ್ಸ್ ಪಡೆದ ಸೌರಭ್ ಚೌಧರಿ ಪ್ರಥಮ ಸ್ಥಾನದೊಂದಿಗೆ ತನ್ನದೇ ಹೆಸರಿನಲ್ಲಿದ್ದ 245 ಪಾಯಿಂಟ್ಸ್ ದಾಖಲೆಯನ್ನು ಉತ್ತಮ ಪಡಿಸಿಕೊಂಡಿದ್ದಾರೆ. ಭಾನುವಾರ (ಮೇ 26) ಅಪೂರ್ವಿ ಚಂದೇಲಾ ಅವರಿಗೂ ಬಂಗಾರ ಲಭಿಸಿತ್ತು.
2013ರ ಶೂಟಿಂಗ್ ವಿಶ್ವಕಪ್ ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಪಿಸ್ತೂಲ್ ಶೂಟರ್ ಎಂಬ ಕೀರ್ತಿಗೆ ರಾಹಿ ಸರ್ನೋಬತ್ ಭಾಜನರಾದರು. ಇದೀಗ 25ಮೀ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ ಕಳೆದ ವರ್ಷ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಆಗಿದ್ದರು.
ಮೀರತ್‌ನ ತರುಣ ಸೌರಭ್ ಅವರ ಪಾಲಿಗೂ ಇದು ಎರಡನೇ ಚಿನ್ನದ ಪದಕವಾಗಿದೆ. ಈ ಎರಡೂ ಚಿನ್ನದ ಪದಕ ಗೆದ್ದ ಸೌರಭ್ ಹಾಗೂ ರಾಹಿ ಸರ್ನೋಬತ್ ಅವರು ಮುಂಬರುವ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.


