ವಿಶ್ವ ಮಹಿಳಾ ಬಾಕ್ಸಿಂಗ್: ಕ್ವಾರ್ಟರ್ ಫೈನಲ್ಸ್ ತಲುಪಿದ ಮಂಜು ರಾಣಿ
ನವದೆಹಲಿ: ರಷ್ಯಾದಲ್ಲಿ ನಡೆಯುತ್ತಿರುವ ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಭಾರತದ ಮಂಜು ರಾಣಿ(48 ಕೆಜಿ) ಕ್ವಾರ್ಟರ್ ಫೈನಲ್ ತಲುಪಿದ್ದಾರೆ. ಆದರೆ, ಮಂಜು ಬಂಬೋರಿಯಾ ಅವರು ಟೂರ್ನಿಯಿಂದ ಹೊರ ನಡೆದಿದ್ದಾರೆ.
64 ಕೆ.ಜಿ ವಿಭಾಗದಲ್ಲಿ ಮಂಜು ಬಂಬೋರಿಯಾ ಅವರು ನಾಲ್ಕನೇ ಶ್ರೇಯಾಂಕದ ಕರಿನಿ ಏಂಜೆಲಾ ವಿರುದ್ಧ 1-4 ಅಂತರದಲ್ಲಿ ಸೋತು ಬಾಕ್ಸಿಂಗ್ ಚಾಂಪಿಯನ್‍ಶಿಪ್ ಅಭಿಯಾನ ಮುಗಿಸಿದರು. ಆದರೆ, ಎರಡನೇ ಶ್ರೇಯಾಂಕಿತೆ ಮಂಜು ರಾಣಿ ಅವರು 48 ಕೆ.ಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ವೆನಿಜ್ಯೂಲಾದ ರೋಜಸ್ ಟೇನೋಸ್ ಸೆಡೆನೊ ವಿರುದ್ಧ 5-0 ಅಂತರದಲ್ಲಿ ಗೆದ್ದು ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ.
ಮಂಜು ರಾಣಿಗೆ ಮುಂದಿನ ಸುತ್ತಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗಲಿದೆ. ಕಳೆದ ಆವೃತ್ತಿಯಲ್ಲಿ ಕಂಚಿನ ಪದಕ ಪಡೆದಿದ್ದ ದಕ್ಷಿಣ ಕೊರಿಯಾದ ಕಿಮ್ ಹ್ಯಾಂಗ್ ಮೀ ವಿರುದ್ಧ ಅ.10 ರಂದು ಸೆಣಸಲಿದ್ದಾರೆ.
ಇನ್ನು ಮಂಗಳವಾರ, ಆರು ಬಾರಿ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) 16 ನೇ ಸುತ್ತಿನಲ್ಲಿ ಥೈಲ್ಯಾಂಡ್ನ ಜುಟಮಾಸ್ ಜಿಟ್ಪಾಂಗ್ ಅವರನ್ನು ಎದುರಿಸುವ ಮೂಲಕ ತಮ್ಮ ಅಭಿಯಾನ ಪ್ರಾರಂಭಿಸಲಿದ್ದಾರೆ. 75 ಕೆಜಿ ವಿಭಾಗದಲ್ಲಿ ಈ ಹಿಂದೆ ಬೆಳ್ಳಿ ಪದಕ ವಿಜೇತೆಯಾಗಿದ್ದ ಸವೀತಿ ಬೂರಾ (75 ಕೆಜಿ) ಎರಡನೇ ಶ್ರೇಯಾಂಕಿತ ವೆಲ್ಷ್ ವುಮನ್ ಲಾರೆನ್ ಪ್ರೈಸ್ ವಿರುದ್ಧ ಸೆಣಸಲಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ