ವಿಶ್ವ ಚಾಂಪಿಯನ್‌ಶಿಪ್: ಸೆಮಿಫೈನಲ್ಸ್ ನಲ್ಲಿ ಮೇರಿ ಕೋಮ್ ಗೆ ಸೋಲು, ಕಂಚಿನ ಪದಕಕ್ಕೆ ತೃಪ್ತಿ
ಉಡಾನ್ ಉಡೆ(ರಷ್ಯಾ): ಇಲ್ಲಿ ನಡೆಯುತ್ತಿರುವ ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 51 ಕೆ.ಜಿ ವಿಭಾಗದಲ್ಲಿ ಭಾರತದ ಅನುಭವಿ ಬಾಕ್ಸರ್, ಆರು ಬಾರಿ ವಿಶ್ವ ಚಾಂಪಿಯನ್ ಮೇರಿ ಕೋಮ್ ಸೆಮಿ ಫೈನಲ್ಸ್ ನಲ್ಲಿ ಪರಾಜಿತರಾಗಿದ್ದಾರೆ.
ಟರ್ಕಿಯ ಬುಸೆನಾಜ್ ಕ್ಯಾಕಿರೊಗ್ಲು ಅವರೆದುರು ಸೋಲುಂಡ ಮೇರಿ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಮೂರನೇ ಶ್ರೇಯಾಂಕಿತ ಮೇರಿ ಕೋಮ್ ದ್ವಿತೀಯ ಶ್ರೇಯಾಂಕಿತೆಯಾದ ಕ್ಯಾಕಿರೊಗ್ಲು ಅವರ ವಿರುದ್ಧ 1-4 ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.
ಆರಂಭಿಕ ಸುತ್ತಿನಲ್ಲಿ ಕೋಮ್ ಮುಂದಿದ್ದರೂ ಸಹ ನಂತರದಲ್ಲಿ ಎದುರಾಳಿಯ ಹೊಡೆತಕ್ಕೆ ತಕ್ಕ ತಂತ್ರ ರೂಪಿಸುವುದು ಅವರಿಗೆ ಕಠಿಣವಾಗಿತ್ತು. ಕಡೆಯ ಮೂರು ನಿಮಿಷಗಳಲ್ಲಿ ಇಬ್ಬರೂ ಬಾಕ್ಸರ್ ಗಳು ಪರಸ್ಪರ ಸಮಬಲ ಪ್ರದರ್ಶಿಸಿದ್ದರಾದರೂ ಕ್ಯಾಕಿರೊಗ್ಲು ತೀಕ್ಷ್ಣ ಹೋರಾಟ ನೀಡಿ ಗೆಲುವು ಸಾಧಿಸಿದ್ದರು.
ಮೇರಿ ಕೋಮ್ ಪಾಲಿಗೆ ಈ ಕಂಚಿನ ಪದಕವು 51 ಕೆಜಿ ವಿಭಾಗದಲ್ಲಿ ಅವರ ಮೊದಲ ವಿಶ್ವ ಮಟ್ಟದ ಪದಕವಾಗಿದೆ. ಆರು ವಿಶ್ವಚಾಂಪಿಯನ್ ಶಿಪ್ ಪದಕಗಳಲ್ಲದೆ ಒಲಿಂಪಿಕ್ ಕಂಚಿನ ಪದಕ (2012), ಐದು ಏಷ್ಯನ್ ಪ್ರಶಸ್ತಿಗಳು, ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಗಳಲ್ಲಿ ಸ್ವರ್ಣ ಪದಕಗಳನ್ನು ಮೇರಿ ಕೋಮ್ ಗಳಿಸಿಕೊಂಡಿದ್ದಾರೆ. ಅಲ್ಲದೆ ಹಲವಾರು ಬಾರಿ ಅಂತರಾಷ್ಟ್ರೀಯ ಅಗ್ರ ಶ್ರೇಯಾಂಕ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ