ರಾಷ್ಟ್ರೀಯ ಗಾಲ್ಫ್ ಜೂನಿಯರ್ ಚಾಂಪಿಯನ್‍ಶಿಪ್: ಅರ್ಜುನ್ ಭಾಟಿಗೆ ಚಾಂಪಿಯನ್ ಗರಿ
ನವದೆಹಲಿ: ಕೋಲ್ಕತ್ತಾದಲ್ಲಿ ಇಂದು ಮುಕ್ತಾಯವಾದ ಇಂಡಿಯನ್ ಗಾಲ್ಫ್ ಯೂನಿಯನ್ ಕಿರಿಯರ ರಾಷ್ಟ್ರೀಯ ಚಾಂಪಿಯನ್‍ಶಿಪ್-2019ರ ಪ್ರಶಸ್ತಿಯನ್ನು ಅರ್ಜುನ್ ಭಾಟಿ ಮುಡಿಗೇರಿಸಿಕೊಂಡಿದ್ದಾರೆ.
ಇಂದು ಮುಕ್ತಾಯವಾದ ಮೂರು ದಿನಗಳ ಫೈನಲ್ ಸುತ್ತಿನಲ್ಲಿ ಅರ್ಜುನ್ ಭಾಟಿ ಅವರು ಬೆಂಗಳೂರಿನ ಆರ್ಯನ್ ಅವರನ್ನು ಮಣಿಸಿ ಚಾಂಪಿಯನ್ ಆದರು. ದೇಶದ ವಿವಿಧ ಭಾಗಗಳಿಂದ ಬಂದಿದ್ದ 100 ಗಾಲ್ಫ್ ಪಟುಗಳನ್ನು ಹಿಂದಿಕ್ಕಿ ಅರ್ಜುನ್ ಭಾಟಿ ಅಂತಿಮವಾಗಿ ಅಗ್ರ ಸ್ಥಾನವನ್ನು ಅಲಂಕರಿಸಿದರು.
ಮೊದಲ ಸ್ಥಾನ ಪಡೆದ ಅರ್ಜುನ್ ಒಟ್ಟು 209 ಸ್ಟ್ರೋಕ್ಸ್ ಹೊಡೆದಿದ್ದರು. ಎರಡನೇ ಸ್ಥಾನ ಪಡೆದ ಬೆಂಗಳೂರಿನ ಆರ್ಯನ್ 213 ಸ್ಟ್ರೋಕ್ಸ್ ಹಾಗೂ ಮೂರನೇ ಸ್ಥಾನ ಪಡೆದ ಲಖ್ನೋದ ಅರಿನ್ 218 ಸ್ಟ್ರೋಕ್ಸ್ ಮಾಡಿದ್ದರು.
ಪ್ರಶಸ್ತಿ ಗೆಲ್ಲುವ ಮೂಲಕ ಅರ್ಜುನ್ ಭಾಟಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಇದರೊಂದಿಗೆ ಅವರು ಒಟ್ಟಾರೆ 15 ಕಿರಿಯರ ರಾಷ್ಟ್ರೀಯ ಚಾಂಪಿಯನ್‍ಶಿಪ್ ಪ್ರಶಸ್ತಿ ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ.
"ಹಾಟ್ರಿಕ್ ಹಾಗೂ 15ನೇ ಕಿರಿಯರ ಚಾಂಪಿಯನ್‍ಶಿಪ್ ಮುಡಿಗೇರಿಸಿಕೊಂಡಿರುವುದರಿಂದ ಹೆಚ್ಚು ಸಂತೋಷವಾಗುತ್ತಿದೆ. ವಿಶ್ವದಲ್ಲೇ ಅಗ್ರ ಸ್ಥಾನವನ್ನು ಅಲಂಕರಿಸುವ ಗುರಿ ಹೊಂದಿದ್ದೇನೆ. ನನ್ನ ಪ್ರಮುಖ ಗುರಿ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಡುವುದಾಗಿದೆ ಎಂದು 15ರ ಪ್ರಾಯದ ಅರ್ಜುನ್ ಭಾಟಿ ಹೇಳಿದರು.
ಅರ್ಜುನ್ ಭಾಟಿ ಜೆಮ್‍ಶೆಡ್ ಪುರದಲ್ಲಿ ನಡೆದಿದ್ದ ಇಂಡಿಯನ್ ಗಾಲ್ಫ್ ಯೂನಿಯನ್ ನ್ಯಾಷನಲ್ ಜೂನಿಯರ್ ಗಾಲ್ಫ್ ಚಾಂಪಿಯನ್‍ಶಿಪ್ ಕೂಡ ಮುಡಿಗೇರಿಸಿಕೊಂಡಿದ್ದರು. ಹಿರಿಯರೊಂದಿಗೆ ಆಡುವ ಜತೆಗೆ ಇದು ಅರ್ಜುನ್ ಪಾಲಿಗೆ ಎರಡನೇ ಹಾಗೂ ವೃತ್ತಿ ಜೀವನದಲ್ಲಿ 15 ಪ್ರಶಸ್ತಿ ಇದಾಗಿದೆ.
ಭಾಟಿ ಇನ್ನೂ ಶಾಲಾ ವಿದ್ಯಾರ್ಥಿಯಾಗಿದ್ದು, ತನ್ನ ಏಳನೇ ವಯಸ್ಸಿನಿಂದ ಗಾಲ್ಫ್ ಆಡುತ್ತಿದ್ದಾರೆ. ಇಲ್ಲಿ ತನಕ ಅವರು 150 ಟೂರ್ನಿಗಳಲ್ಲಿ ಭಾಗವಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ