ಒಲಿಂಪಿಕ್ಸ್ ಚಾಂಪಿಯನ್ ಮಣಿಸಿದ್ದು ನನ್ನ ವೃತ್ತಿ ಜೀವನದ ಮಹತ್ವದ ತಿರುವು: ಪಿವಿ ಸಿಂಧು

2012 ರಲ್ಲಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುಯೆರುಯಿ ಅವರನ್ನು ಸೋಲಿಸಿರುವುದು ನನ್ನ ವೃತ್ತಿಜೀವನದ ಮಹತ್ವದ ತಿರುವು ಎಂದು ಸಾಬೀತಾಗಿದೆ.
ಪಿವಿ ಸಿಂಧು
ಪಿವಿ ಸಿಂಧು
Updated on

ಮುಂಬೈ: 2012 ರಲ್ಲಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುಯೆರುಯಿ ಅವರನ್ನು ಸೋಲಿಸಿರುವುದು ನನ್ನ ವೃತ್ತಿಜೀವನದ ಮಹತ್ವದ ತಿರುವು ಎಂದು ಸಾಬೀತಾಗಿದೆ. ಈ ಗೆಲುವಿನಿಂದ ನನ್ನ ಸ್ಥೈರ್ಯ ಗಣನೀಯವಾಗಿ ಹೆಚ್ಚಿದೆ ಎಂದು ವಿಶ್ವ ಚಾಂಪಿಯನ್ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಹೇಳಿದ್ದಾರೆ.

ಆನ್ ಲೈನ್ ಚಾಟ್ ಶೋ 'ಇನ್ ದಿ ಸ್ಪೋರ್ಟ್‌ಲೈಟ್' ನಲ್ಲಿ ಟೇಬಲ್ ಟೆನಿಸ್ ಆಟಗಾರ ಮುದಿತ್ ದಾನಿ ಅವರೊಂದಿಗಿನ ಸಂಭಾಷಣೆಯಲ್ಲಿ ಸಿಂಧು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಅಂತಾರಾಷ್ಟ್ರೀಯ ಮಟ್ಟದಲ್ಲಿ ಆರಂಭಿಕವಾಗಿ ಎದುರಾದ ಸೋಲುಗಳಿಂದ ಕಂಗೆಟ್ಟಿದ್ದು ನಿಜ. ಆದರೆ 2012ರರ ಚೀನಾ ಓಪನ್ ನಲ್ಲಿ ಒಲಿಂಪಿಕ್ ಚಾಂಪಿಯನ್ ಲಿ ಕ್ಸುರುಯಿ ಅವರನ್ನು ಮಣಿಸಿದ್ದು, ಹಿರಿಯರ ಸರ್ಕ್ಯೂಟ್‌ನಲ್ಲಿ ಯಶಸ್ವಿಯಾಗುವ ಸಂಕಲ್ಪವನ್ನು ಬಲಪಡಿಸಿತು ಎಂದು ಸಿಂಧು ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಲಂಡನ್ ಒಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ್ದ ಲಿ ಅವರನ್ನು 16 ವರ್ಷದ ಸಿಂಧೂ ಚೀನಾ ಮಾಸ್ಟರ್ಸ್ ನ ಕ್ವಾರ್ಟರ್ ಫೈನಲ್ಸ್ ನಲ್ಲಿ ಬಗ್ಗು ಬಡಿದು ತಮ್ಮ ಘನತೆಯನ್ನು ಹೆಚ್ಚಿಸಿಕೊಂಡಿದ್ದರು. ಇದಾದ ಒಂದು ವರ್ಷದಲ್ಲಿ ಭಾರತೀಯ ಆಟಗಾರ್ತಿ ಪ್ರತಿಷ್ಠಿತ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚೊಚ್ಚಲ ಕಂಚಿನ ಪದಕ ಗೆದ್ದ ಸಾಧನೆ ತೋರಿದರು. ಇದೇ ಟೂರ್ನಿಯಲ್ಲಿ ಎರಡು ಕಂಚು, ಎರಡು ಬೆಳ್ಳಿ ಮತ್ತು ಒಂದು ಸ್ವರ್ಣ ಸೇರಿ ಐದು ಪದಕ ಗದ್ದಿರುವ ಸಿಂಧೂ, ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ ನಲ್ಲಿ ರಜತ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

'ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪ್ರವೇಶಿಸಿದ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದು ಸಾಲುತ್ತಿರಲಿಲ್ಲ. ಮೊದಲ ಸುತ್ತು, ಅರ್ಹತಾ ಸುತ್ತಿನಲ್ಲೇ ನಿರ್ಗಮಿಸುತ್ತಿದ್ದು ತುಂಬಾ ಬೇಸರ ಉಂಟು ಮಾಡುತ್ತಿತ್ತು. ಆಗ ಆಟದ ಕೌಶಲವನ್ನು ಇನ್ನಷ್ಟು ಹೆಚ್ಚಿಸಬೇಕಾದ ಅಗತ್ಯವಿದೆ ಎಂಬುದರ ಬಗ್ಗೆ ನನಗೆ ಅರ್ಥವಾಯಿತು. ಆದ್ದರಿಂದ ಕಠಿಣ ಅಭ್ಯಾಸ ಮಾಡಲು ನಿರ್ಧರಿಸಿದೆ. ಈಗಿನ ಬೆಳವಣಿಗೆಗೆ ಹಿಂದಿನ ತೀರ್ಮಾನವೇ ಕಾರಣ' ಎಂದು ಸಿಂಧು ಹೇಳಿದ್ದಾರೆ.

'ಲಿ ಕ್ಸುರುಯಿ ಅವರನ್ನು ಸೋಲಿಸಿದ್ದು ನನ್ನ ವೃತ್ತಿ ಬದುಕಿನ ಮಹತ್ವದ ತಿರುವು ಎಂದು ನಾನು ಭಾವಿಸುತ್ತೇನೆ. ಆ ಸಮಯದಲ್ಲಿ ಲಿ ಒಲಿಂಪಿಕ್ ಚಾಂಪಿಯನ್ ಆಗಿದ್ದರು. ನಂತರ ನಾನು ಕಠಿಣ ಶ್ರಮದೊಂದಿಗೆ ವರ್ಷದಿಂದ ವರ್ಷ ಹಂತ ಹಂತವಾಗಿ ಸುಧಾರಣೆ ಕಂಡುಕೊಂಡೆ, ' ಎಂದು ಹೈದರಾಬಾದ್ ಆಟಗಾರ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com