ಢಾಕಾ: ಟಿ20 ವಿಶ್ವಕಪ್ ನಲ್ಲಿ ಕೊಹ್ಲಿ ಪಡೆ ಪಾಕಿಸ್ತಾನದ ವಿರುದ್ಧ ಹೀನಾಯ ಸೋಲು ಕಂಡಿತ್ತು. ಆದರೆ, 2021-ಏಷಿಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಹಾಕಿ ತಂಡ ಪಾಕಿಸ್ತಾನವನ್ನು ಹೀನಾಯವಾಗಿ ಸೋಲಿಸಿ ಸೇಡು ತೀರಿಸಿಕೊಂಡಿದೆ.
ಉಭಯ ತಂಡಗಳ ನಡುವೆ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ 3-1 3-1 ಅಂತರದ ಗೋಲುಗಳಿಂದ ವಿಜಯ ದುಂದುಬಿ ಮೊಳಗಿಸಿದೆ. ಇದಕ್ಕೂ ಮುನ್ನ ಅಕ್ಟೋಬರ್ 24 ರಂದು ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿತ್ತು. ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ, ಟೀಂ ಇಂಡಿಯಾವನ್ನು ಸೋಲುಣಿಸಿರುವುದು ದಾಖಲೆಯಾಗಿದೆ.
ಇಂದು ಢಾಕಾದಲ್ಲಿ ನಡೆದ ಏಷಿಯನ್ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಭಾರತದ ಪರ ಎರಡು ಗೋಲು ಗಳಿಸಿದ ಹರ್ಮನ್‌ಪ್ರೀತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಗೆಲುವಿನೊಂದಿಗೆ ಭಾರತ 7 ಪಾಯಿಂಟ್ಸ್ ತನ್ನ ಖಾತೆಗೆ ಹಾಕಿಕೊಂಡಿತು. ಈ ವಿಜಯದೊಂದಿಗೆ ಟೀಂ ಇಂಡಿಯಾ ಹಾಕಿ ಸೆಮಿಫೈನಲ್ ತಲುಪುವುದು ಖಚಿತವಾಗಿದೆ. ಆದರೆ, ಅತ್ತ ಪಾಕಿಸ್ತಾನಕ್ಕೂ ಸೆಮಿಫೈನಲ್ ಗೆ ಕಮ್ ಬ್ಯಾಕ್ ಮಾಡುವ ಅವಕಾಶ ಇದೆ. ಏಕೆಂದರೆ ಈ ಟೂರ್ನಿಯಲ್ಲಿ ಕೇವಲ 5 ತಂಡಗಳು ಆಡುತ್ತಿವೆ. ಪಾಕಿಸ್ತಾನ ಈಗ 1 ಅಂಕ ಪಡೆದಿರುವ ತಂಡವಾಗಿದೆ.
ಕಮಾಲ್ ಆಟ ಪ್ರದರ್ಶಿಸಿದ ಹರ್ಮನ್‌ಪ್ರೀತ್!
ಹರ್ಮನ್‌ಪ್ರೀತ್ ಸಿಂಗ್ ಪಂದ್ಯದ ಮೊದಲ ಮತ್ತು ನಾಲ್ಕನೇ ಕ್ವಾರ್ಟರ್‌ನಲ್ಲಿ ಭಾರತಕ್ಕಾಗಿ 2 ಅದ್ಭುತ ಗೋಲುಗಳನ್ನು ಭಾರಿಸಿದರು. ಪಂದ್ಯದುದ್ದಕ್ಕೂ ಹರ್ಮನ್ ಪ್ರೀತ್ ಅಮೋಘ ಆಟ ಪ್ರದರ್ಶಿಸಿದರು. ಇದೇ ವೇಳೆ ಪಾಕಿಸ್ತಾನದ ಜುನೈದ್ ಮಂಜೂರ್ ಏಕೈಕ ಗೋಲು ಗಳಿಸಿದರು. ಈ ಪಂದ್ಯದಲ್ಲಿ ಆಕಾಶದೀಪ್ ಸಿಂಗ್ ಭಾರತದ ಪರ ಎರಡನೇ ಗೋಲು ದಾಖಲಿಸಿದರು. ಮೊದಲ ಕ್ವಾರ್ಟರ್‌ನಲ್ಲಿ ಭಾರತ 1-0 ಮುನ್ನಡೆ ಸಾಧಿಸಿತ್ತು. ಎರಡನೇ ಕ್ವಾರ್ಟರ್‌ನಲ್ಲೂ ಭಾರತೀಯ ಆಟಗಾರರು ಗೋಲು ಗಳಿಸಲು ಸತತ ಅಟ್ಯಾಕ್ ಮಾಡಿದರು. ಆದರೆ ಪಾಕಿಸ್ತಾನ ಆಟಗಾರರು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರಿಂದ ಭಾರತದ ಗೋಲುಗಳ ಸಂಖ್ಯೆ 3ಕ್ಕೆ ಸೀಮಿತವಾಯಿತು.
ಮೊದಲ ಕ್ವಾರ್ಟರ್‌ನಲ್ಲಿ ಭಾರತ ಇನ್ನೂ ಎರಡು ಗೋಲುಗಳನ್ನು ಗಳಿಸಬಹುದಿತ್ತು, ಆದರೆ ಪಾಕಿಸ್ತಾನದ ಗೋಲ್‌ಕೀಪರ್ ಅಲಿ ಅಮ್ಜದ್ ಎರಡು ಅದ್ಭುತ ಡಿಫೆನ್ಸ್ ಗಳನ್ನು ಮಾಡಿದರು. ಈ ಟೂರ್ನಿಯಲ್ಲಿ ಭಾರತ ಮೊದಲ ಪಂದ್ಯದಲ್ಲಿ ಕೊರಿಯಾ ವಿರುದ್ಧದ 2-2 ಸ್ಕೋರ್ ನೊಂದಿಗೆ ಡ್ರಾ ಆದರೆ, ಎರಡನೇ ಪಂದ್ಯದಲ್ಲಿ ಅಬ್ಬರದ ಕಮ್ ಬ್ಯಾಕ್ ಮಾಡಿದ ಭಾರತ ತಂಡ ಬಾಂಗ್ಲಾದೇಶವನ್ನು 9-0 ಅಂತರದಿಂದ ಸೋಲಿಸಿತು. ಮಸ್ಕತ್ ನಲ್ಲಿ 2018ರಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನದ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿತ್ತು. ಅಂದು ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಣೆ ಮಾಡಲಾಗಿತ್ತು.
Advertisement