ನವದೆಹಲಿ/ಮಣಿಪುರ: ಅತ್ತ ಜಪಾನ್ ನ ಟೋಕಿಯೊ ಅಂಗಳದಲ್ಲಿ 49 ಕೆ ಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮಣಿಪುರ ಮೂಲದ ಸೈಕೊಮ್ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಇತ್ತ ಭಾರತದಲ್ಲಿ ಅವರಿಗೆ ಅಭಿನಂದನೆ, ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ.
ಮೀರಾಬಾಯಿ ಸಾಧನೆಗೆ ದೇಶಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಮಂತ್ರಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಸೇರಿದಂತೆ ಗಣ್ಯರು ಮೀರಾಬಾಯಿ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.ಮೊದಲ ಪ್ರಯತ್ನದಲ್ಲೇ ಇಂಪಾಲ್ ಮೂಲದ ಆಟಗಾರ್ತಿ ಸ್ನ್ಯಾಚ್ ವಿಭಾಗದಲ್ಲಿ 84 ಕೆ.ಜಿ ಭಾರವನ್ನು ಮೀರಾಬಾಯಿ ಚಾನು ಅನಾಯಾಸವಾಗಿ ಎತ್ತುವಲ್ಲಿ ಯಶಸ್ವಿಯಾದರು.
ಭಾರತ ಅತ್ಯುತ್ತಮವಾಗಿ ಶುಭಾರಂಭ ಮಾಡಿದೆ, ಇದಕ್ಕಿಂತ ಖುಷಿಯ ವಿಚಾರ ಇನ್ನೇನಿದೆ, ಮೀರಾಬಾಯಿಯವರ ಸಾಧನೆಯಿಂದ ಭಾರತಾಂಬೆ ಸಂತುಷ್ಟಳಾಗಿದ್ದಾಳೆ. ಆಕೆಯ ಯಶಸ್ಸು ಪ್ರತಿ ಭಾರತೀಯನಿಗೆ ಸ್ಪೂರ್ತಿ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಮಣಿಪುರದ ಇಂಫಾಲ್ ಮೂಲದವರಾದ ಮೀರಾಬಾಯಿ ಸಾಧನೆಗೆ ಅಲ್ಲಿನ ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಹಾಡಿಹೊಗಳಿದ್ದಾರೆ, ಇಂದು ಎಂಥಹ ದಿನ, ಭಾರತಕ್ಕೆ ಎಂತಹ ಗೆಲುವು, ಮಹಿಳೆಯರ 49 ಕೆ ಜಿ ಭಾರ ಎತ್ತುವ ವಿಭಾಗದಲ್ಲಿ ಮೀರಾಬಾಯಿ ಬೆಳ್ಳಿ ಗೆದ್ದಿದ್ದಾರೆ. ಮೀರಾಬಾಯಿ ನೀವು ಇಡೀ ದೇಶ ಹೆಮ್ಮೆಪಡುವ ಕೆಲಸ ಮಾಡಿದ್ದೀರಿ ಎಂದು ಹೊಗಳಿದ್ದಾರೆ.
What a day! What a win for India. Mirabai Chanu wins silver in Weightlifting Women's 49kg category, India open tally in Tokyo Olympics. You have made the country proud today.
Bravo
ಕುಟುಂಬಸ್ಥರಲ್ಲಿ ಆನಂದಭಾಷ್ಪ: ಮೀರಾಬಾಯಿಯವರು ಟೋಕಿಯೊ ಅಂಗಳದಲ್ಲಿ ಬೆಳ್ಳಿ ಪದಕ ಗೆಲ್ಲುವುದನ್ನು ಮನೆಯಲ್ಲಿ ಟಿವಿ ಪರದೆ ಮುಂದೆ ಕುಳಿತು ಕಣ್ತುಂಬಿಕೊಂಡ ಅವರ ಕುಟುಂಬಸ್ಥರು ಭಾವಪರವಶರಾಗಿ ಆನಂದಭಾಷ್ಪ ಹಾಕಿದ್ದಾರೆ.
ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಪ್ರತಿಕ್ರಿಯೆ ನೀಡಿ, ಮೀರಾಬಾಯಿಯವರಿಗೆ ಮೊದಲು ಅಭಿನಂದನೆ ಸಲ್ಲಿಸೋಣ, ಪ್ರಧಾನಿ ಮೋದಿ ಮತ್ತು ಎಲ್ಲ ಭಾರತೀಯರ ಪರವಾಗಿ ನಿಮಗೆ ಮೊದಲು ಅಭಿನಂದನೆಗಳು ಮತ್ತು ಧನ್ಯವಾದಗಳು. ನೀವು 135 ಕೋಟಿ ಭಾರತೀಯರ ಮುಖದಲ್ಲಿ ನಗು ತರಿಸಿದ್ದೀರಿ. ಮೊದಲ ದಿನವೇ ಬೆಳ್ಳಿ ಪದಕ ಸಿಕ್ಕಿದೆ. ದೇಶ ಹೆಮ್ಮೆಪಡುವ ಕೆಲಸ ಮಾಡಿದ್ದೀರಿ ಎಂದಿದ್ದಾರೆ. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಕೂಡ ಮೀರಾಬಾಯಿ ಚಾನು ಅವರಿಗೆ ಅಭಿನಂದನೆ ಸಲ್ಲಿಸಿ ಇಂದು ಒಲಿಂಪಿಕ್ ಅಂಗಳದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತೀಯರ ಉತ್ಸಾಹ, ಸ್ಪೂರ್ತಿಯನ್ನು ಎತ್ತಿಹಿಡಿದಿದ್ದೀರಿ ಎಂದಿದ್ದಾರೆ.
Advertisement