ನೀರಜ್ ಚೋಪ್ರಾ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಸ್ವರ್ಣ ಪದಕವನ್ನು ಮುತ್ತಿಟ್ಟ ಹುಡುಗನ ಜಾವೆಲಿನ್ ಮೋಹ
ನೀರಜ್ ಚೋಪ್ರಾ, ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಹೆಸರು ಬರೆದಾಗಿದೆ. ಅಥ್ಲೆಟಿಕ್ಸ್ ನಲ್ಲಿ ಶತಮಾನ ನಂತರ ಭಾರತಕ್ಕೆ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದು ತಂದಿದ್ದಾರೆ. ಈ ಮೊದಲು 2008ರಲ್ಲಿ ಭಾರತದ ಅಭಿನವ ಬಿಂದ್ರಾ ಅವರಿಗೆ ಶೂಟಿಂಗ್ ಗೇಮ್ ನಲ್ಲಿ ಚಿನ್ನದ ಪದಕ ಬಂದಿತ್ತು.
Published: 08th August 2021 10:15 AM | Last Updated: 09th August 2021 07:20 PM | A+A A-

ನೀರಜ್ ಚೋಪ್ರಾ
ಚೆನ್ನೈ: ನೀರಜ್ ಚೋಪ್ರಾ, ಭಾರತದ ಕ್ರೀಡಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಹೆಸರು ಬರೆದಾಗಿದೆ. ಅಥ್ಲೆಟಿಕ್ಸ್ ನಲ್ಲಿ ಶತಮಾನ ನಂತರ ಭಾರತಕ್ಕೆ ಒಲಿಂಪಿಕ್ ನಲ್ಲಿ ಚಿನ್ನ ಗೆದ್ದು ತಂದಿದ್ದಾರೆ. ಈ ಮೊದಲು 2008ರಲ್ಲಿ ಭಾರತದ ಅಭಿನವ ಬಿಂದ್ರಾ ಅವರಿಗೆ ಶೂಟಿಂಗ್ ಗೇಮ್ ನಲ್ಲಿ ಚಿನ್ನದ ಪದಕ ಬಂದಿತ್ತು.
ಇದೀಗ ಜಾವೆಲಿನ್ ಥ್ರೋ ಎಸೆತ ಕ್ರೀಡೆಯಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ ಸಿಕ್ಕಿದೆ. ಟೋಕಿಯೊ 2020ನೇ ಒಲಿಂಪಿಕ್ಸ್ ಕೊನೆಯಾಗುವುದು ಭಾರತಕ್ಕೆ ಇದಕ್ಕಿಂತ ಸಂಭ್ರಮ, ಖುಷಿ ಬೇರೆಯಿಲ್ಲ, ಅದಕ್ಕೂ 90 ನಿಮಿಷ ಮೊದಲು ಕುಸ್ತಿಪಟು ಬಜರಂಗ್ ಪೂನಿಯಾ ಕಂಚಿನ ಪದಕ ಗೆದ್ದಿದ್ದರು. ಚಿನ್ನದ ಪದಕ ಸೇರಿ ಈ ಬಾರಿ ಒಲಿಂಪಿಕ್ಸ್ ನಲ್ಲಿ ಏಳು ಪದಕ ಭಾರತಕ್ಕೆ ಸಿಕ್ಕಿದೆ.
ಈ ಹಿಂದೆ ಒಲಿಂಪಿಕ್ಸ್ ನಲ್ಲಿ ಟ್ರ್ಯಾಕ್ ಮತ್ತು ಫೀಲ್ಡ್ ಸ್ಪರ್ಧೆಯಲ್ಲಿ ಮಿಲ್ಕಾ ಸಿಂಗ್ ಮತ್ತು ಪಿ ಟಿ ಉಷಾ ಚಿನ್ನದ ಪದಕದ ಹತ್ತಿರಕ್ಕೆ ಬಂದಿದ್ದರು. ಕೂದಲೆಳೆ ಅಂತರದಲ್ಲಿ ಇಬ್ಬರಿಗೂ ಪದಕ ಕೈತಪ್ಪಿ ಹೋಗಿತ್ತು, ಆದರೆ ಈ ಬಾರಿ ನೀರಜ್ ಚೋಪ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ಬಹುತೇಕ ಒಲಿಂಪಿಕ್ ಅಥ್ಲೆಟ್ ಗಳಂತೆ ನೀರಜ್ ಕೂಡ ಧೈನ್ಯ ಹಿನ್ನೆಲೆಯಿಂದ ಬಂದವರು. ಪಾಣಿಪತ್ ನ ಖಂಡ್ರ ಮೂಲದ ನೀರಜ್ ಅವರದ್ದು ರೈತ ಕುಟುಂಬ, ಆದರೆ ಭಾರೀ ಕಷ್ಟದ ಬಡತನದ ಬದುಕಲ್ಲ. ಚಿಕ್ಕಂದಿನಿಂದಲೇ ಅವರ ಕನಸು ಜಾವೆಲಿನ್ ಥ್ರೋ ಒಂದೇ ಆಗಿತ್ತಂತೆ. ಸಾಧ್ಯವಾದಷ್ಟು ದೂರ ಎಸೆಯುವುದೇ ಅವರ ಗುರಿಯಾಗಿತ್ತು, ಆ ಮೂಲಕ ಪದಕಕ್ಕೆ ಮುತ್ತಿಡುವುದು ಅವರ ಹಲವು ವರ್ಷಗಳ ಕನಸು. ಅದನ್ನು ನಿನ್ನೆಯ ಪಂದ್ಯದಲ್ಲಿ ಮಾಡಿ ತೋರಿಸಿದ್ದಾರೆ.
ಆಟದಲ್ಲಿ ಮುಖ್ಯವಾಗಿ ಮನಸ್ಸು ಶಾಂತವಾಗಿರಬೇಕು, ಅದು ನೀರಜ್ ಅವರಿಗೆ ಒಲಿಂಪಿಕ್ ಗೇಮ್ ನಲ್ಲಿ ಮನಸ್ಥಿತಿ ತಂದುಕೊಟ್ಟಿತ್ತು. 2019ರಲ್ಲಿ ಮೊಣಕೈ ನೋವಿಗೆ ತುತ್ತಾಗಿದ್ದರು, ಆದರೆ ಸತತ ಕಠಿಣ ತರಬೇತಿಯಿಂದ ಗುಣಮುಖರಾಗಿ ಈ ವರ್ಷ ಜನವರಿಯಲ್ಲಿ ಒಲಿಂಪಿಕ್ ಗೇಮ್ ನಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡರು.
ಕಳೆದ ವರ್ಷದ ಒಲಿಂಪಿಕ್ ಪಂದ್ಯ ಈ ವರ್ಷಕ್ಕೆ ಮುಂದೂಡಲ್ಪಟ್ಟಿದ್ದು ನೀರಜ್ ಚೋಪ್ರಾಗೆ ವರದಾನವಾಗಿತ್ತು. ಹೆಚ್ಚುವರಿ ಸಮಯ ಸಿಕ್ಕಿದ್ದು ಮತ್ತಷ್ಟು ಅಭ್ಯಾಸಕ್ಕೆ ಎಡೆಮಾಡಿಕೊಟ್ಟಿತು. ಒಲಿಂಪಿಕ್ ಗೇಮ್ ನ ಕನಸು ಕಂಡಿದ್ದರು. ಮೂಲತಃ ಮಾಡೆಲಿಂಗ್, ಕಮರ್ಷಿಯಲ್ ಟಿವಿ ಜಾಹೀರಾತು ಮಾಡಿಕೊಂಡಿದ್ದ ನೀರಜ್ ಇತ್ತೀಚೆಗೆ ಅದೆಲ್ಲದರಿಂದ ದೂರವುಳಿದಿದ್ದರು. ಅತಿಯಾಗಿ ಫೋನ್ ನ್ನು ಕೂಡ ಬಳಸುತ್ತಿರಲಿಲ್ಲ. ಒಲಿಂಪಿಕ್ ಮೇಲೆ ಅವರ ಗಮನ ಎಷ್ಟಿತ್ತೆಂದರೆ ಬೇರಾವುದರ ಮೇಲೆ ಕೂಡ ಅವರಿಗೆ ಗಮನವಿರಲಿಲ್ಲ, ಆಸಕ್ತಿಯೂ ಇರಲಿಲ್ಲ.
ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತ ಒಲಿಂಪಿಕ್ಸ್‌ನಲ್ಲಿ ಇದುವರೆಗಿನ ತನ್ನ ಸಾಧನೆಯನ್ನು ಉತ್ತಮಗೊಳಿಸಿಕೊಳ್ಳಲು ನೆರವಾಗಿದೆ. ಭಾರತ ೨೦೧೨ರ ಲಂಡನ್ ಒಲಿಂಪಿಕ್ಸ್‌ನಲ್ಲಿ ೬ ಪದಕಗಳನ್ನು ಗಳಿಸಿತ್ತು. ಇದೀಗ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ೭ ಪದಕಗಳನ್ನು ಗಳಿಸುವ ಮೂಲಕ ಸಾಧನೆಯನ್ನು ಮೆರೆದಿದೆ.
ನವ ಭಾರತಕ್ಕೆ, ಕ್ರೀಡಾ ಕ್ರಾಂತಿಗೆ ನೀರಜ್ ಚೋಪ್ರಾ ಮುನ್ನುಡಿ ಬರೆದಿದ್ದಾರೆ. ಅದನ್ನು ದೇಶ, ಕ್ರೀಡಾ ದಿಗ್ಗಜರು, ಸರ್ಕಾರ ಮುಂದಿನ ದಿನಗಳಲ್ಲಿ ಯಾವ ರೀತಿ ತೆಗೆದುಕೊಂಡು ಹೋಗಲಿದೆ ಎಂಬುದು ಮುಖ್ಯವಾಗುತ್ತದೆ.