
ಸುಶೀಲ್ ಕುಮಾರ್
ನವದೆಹಲಿ: ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಬಾರಿ ಕಿಯೊದಲ್ಲಿ ನಡೆಯುತ್ತಿರುವ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕುಸ್ತಿಪಟು ಸುಶೀಲ್ ಕುಮಾರ್ ಭಾಗವಹಿಸಬೇಕಾಗಿತ್ತು.
ಆದರೆ ಸ್ವಯಂ ಕೃತ ಯಡವಟ್ಟಿನಿಂದ ಸುಶೀಲ್ ಕುಮಾರ್ ಈ ಬಾರಿ ಜೈಲಿನಲ್ಲಿ ಕುಳಿತು ಒಲಂಪಿಕ್ಸ್ ಕ್ರೀಡಾಕೂಟವನ್ನು ವೀಕ್ಷಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಸುಶೀಲ್ ಕುಮಾರ್ ಪ್ರಸ್ತುತ ತಿಹಾರ್ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಕುಸ್ತಿ ತಾರೆ, ಒಲಿಂಪಿಕ್ಸ್‌ನಲ್ಲಿ ಎರಡು ಪದಕ ಗೆದ್ದ ಏಕೈಕ ಭಾರತೀಯ ಕ್ರೀಡಾಪಟುವಾಗಿರುವ ಸುಶೀಲ್ ಕುಮಾರ್, ತನಗೆ ಒಲಿಂಪಿಕ್ಸ್ ಕ್ರೀಡೆಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರು.
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕುಸ್ತಿಪಟು ಮಾಡಿಕೊಂಡ ಮನವಿಯನ್ನು ನ್ಯಾಯಲಯ ಹಾಗೂ ಜೈಲು ಅಧಿಕಾರಿಗಳು ಮಾನ್ಯ ಮಾಡಿದ್ದು, ಜೈಲಿನ ಅಧಿಕಾರಿಗಳು ಆತನಿಗೆ ಟಿವಿ ಹಂಚಿಕೆ ಮಾಡಿದ್ದಾರೆ. "ಸುಶೀಲ್ ಕುಮಾರ್ ಇರುವ ವಾರ್ಡ್ ನ ಕಾಮನ್ ಏರಿಯಾದಲ್ಲಿ ಇತರರೊಂದಿಗೆ ಟಿವಿಯನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ" ಎಂದು ಬಂಧಿಖಾನೆ ಪ್ರಧಾನ ನಿರ್ದೇಶಕ ಸಂದೀಪ್ ಗೋಯಲ್ ತಿಳಿಸಿದ್ದಾರೆ.
ಮೇ.23 ರಂದು ಯುವ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣದಲ್ಲಿ ಸುಶೀಲ್ ಕುಮಾರ್ ಆರೋಪಿಯಾಗಿದ್ದಾರೆ. ಕೆಲ ಕಾಲ ನಾಪತ್ತೆಯಾಗಿದ್ದ ಸುಶೀಲ್‌ನನ್ನು ನಂತರ ಪೊಲೀಸರು ಬಂಧಿಸಿದ್ದರು.